ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹೊಸದಿಲ್ಲಿಗೆ ಪ್ರಯಾಣ

Update: 2021-07-19 14:30 GMT

ಬೆಂಗಳೂರು, ಜು.19: ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ನೇಮಕ, ವಿವಿಧ ಸಮಿತಿಗಳ ರಚನೆ ಸೇರಿದಂತೆ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಯಾವ ರೀತಿ ಸನ್ನದ್ಧುಗೊಳಿಸಬೇಕೆಂಬ ವಿಚಾರದ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಸೂಚನೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.

ಮಂಗಳವಾರ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುಜೇವಾಲ ಜೊತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ.

ಕಳೆದ ತಿಂಗಳು ಡಿ.ಕೆ.ಶಿವಕುಮಾರ್ ಹೊಸದಿಲ್ಲಿಗೆ ಭೇಟಿ ನೀಡಿ, ಕೆಪಿಸಿಸಿಗೆ ನೂತನ ಪದಾಧಿಕಾರಿಗಳು ಹಾಗೂ ಮುಂಚೂಣಿ ಘಟಕಗಳಿಗೆ ನೂತನ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ರಾಹುಲ್ ಗಾಂಧಿ ಜೊತೆ ಒಂದು ಸುತ್ತಿನ ಚರ್ಚೆ ಮಾಡಿದ್ದರು. ಇದೀಗ, ಸಿದ್ದರಾಮಯ್ಯರನ್ನು ಹೊಸದಿಲ್ಲಿಗೆ ಕರೆಸಿಕೊಂಡಿರುವ ಎಐಸಿಸಿ ನಾಯಕರು, ಈ ಬಗ್ಗೆ ಚರ್ಚೆ ನಡೆಸಿ ಮಾಸಾಂತ್ಯಕ್ಕೆ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಮಹಿಳಾ ಕಾಂಗ್ರೆಸ್, ಅಲ್ಪಸಂಖ್ಯಾತರ ಘಟಕ, ಹಿಂದುಳಿದ ವರ್ಗಗಳ ಘಟಕ, ಸೇವಾದಳದ ಅಧ್ಯಕ್ಷರ ಬದಲಾವಣೆ, ಜೊತೆಗೆ 12ಕ್ಕೂ ಹೆಚ್ಚು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಿ ಹೊಸಬರನ್ನು ನೇಮಕ ಮಾಡಲು ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬೆಂಬಲಿಗರು ಬಹಿರಂಗವಾಗಿ ‘ಮುಂದಿನ ಸಿಎಂ’ ಎಂದು ತಮ್ಮ ನಾಯಕರ ಪರವಾಗಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಈ ಸಂಬಂಧ ಉಭಯ ನಾಯಕರಿಗೆ ತಮ್ಮ ಬೆಂಬಲಿಗರು ಇನ್ನು ಮುಂದೆ ಈ ವಿಚಾರವನ್ನು ಪ್ರಸ್ತಾಪಿಸದಂತೆ ಕಡಿವಾಣ ಹಾಕಲು ಸೂಚನೆ ನೀಡುವ ಸಾಧ್ಯತೆಯಿದೆ.

ಮುಂದೆ ನಡೆಯುವಂತಹ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಈಗಿನಿಂದಲೆ ತಳಮಟ್ಟದಿಂದ ಸಂಘಟಿಸುವಂತೆ ಉಭಯ ನಾಯಕರೊಂದಿಗೆ ಎಐಸಿಸಿ ವರಿಷ್ಠರು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಮಾತ್ರ ಭದ್ರ ಬುನಾದಿ ಇದೆ. ಆದುದರಿಂದ, ಮುಂದಿನ ಚುನಾವಣೆಯಲ್ಲಿ ಮೈಮರೆಯದೆ, ಯಾವುದೆ ರೀತಿಯ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಸಾಮೂಹಿಕ ನಾಯಕತ್ವದಲ್ಲಿ ಮುಂದುವರೆಯುವಂತೆ ವರಿಷ್ಠರು ಸೂಚನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News