‘ಆಡಿಯೋ’ ನಳಿನ್ ಕುಮಾರ್ ಕಟೀಲ್ ಅವರದ್ದೇ, ನಮ್ಮಲ್ಲಿ ಮಿಮಿಕ್ರಿ ಮಾಡುವವರಿಲ್ಲ: ಡಿ.ಕೆ.ಶಿವಕುಮಾರ್

Update: 2021-07-19 14:35 GMT

ಬೆಂಗಳೂರು, ಜು.19: ವೈರಲ್ ಆಗಿರುವುದು ಯಾರೋ ಜನಸಾಮಾನ್ಯರ ಆಡಿಯೋ ಅಲ್ಲ. ಈ ಆಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಆಡಿಯೋದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಅವರ ಪಕ್ಷದ ಬಗ್ಗೆ ಮಾತನಾಡಿದ್ದಾರೆ. ಈ ಆಡಿಯೋ ಬಿಡುಗಡೆ ಹಿಂದೆ ನಾವಂತು ಇಲ್ಲ. ಈ ಹಿಂದೆ ಯಡಿಯೂರಪ್ಪ ಅವರ ಆಡಿಯೋ ಕೂಡ ಬಿಡುಗಡೆ ಆಗಿತ್ತು. ಅದರ ವಿಚಾರ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ ಎಂದರು.

ಕಟೀಲ್ ಅವರ ಧ್ವನಿಯಂತೆ ಮಿಮಿಕ್ರಿ ಮಾಡಿ ಆಡಿಯೋ ವೈರಲ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಸುಧಾಕರ್ ಅವರದ್ದು ಬೇಕಿದ್ದರೆ ಮಿಮಿಕ್ರಿ ಮಾಡಿಸೋಣ. ನಾವೇನು ಮಿಮಿಕ್ರಿ ಮಾಡುವವರನ್ನು ಇಟ್ಟುಕೊಂಡು ತಿರುಗುತ್ತಿದ್ದೇವಾ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ, ಜನಹಿತ ಮರೆತಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು ಎಂದು ಜನ ನಿರ್ಧರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಎರಡು ದಿನಗಳ ಕಾಲ ಲಂಬಾಣಿ ತಾಂಡಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಪ್ರತಿಯೊಂದಕ್ಕೂ ಆನ್‍ಲೈನ್ ಎಂದು ಸರಕಾರ ಹೇಳುತ್ತೇ, ಆದರೆ, ಈ ಜನರಿಗೆ ಸರಕಾರದ ಒಂದೇ ಒಂದು ಯೋಜನೆ ತಲುಪಿರುವುದನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದರು.

ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ದಿಲ್ಲಿಗೆ ಭೇಟಿ: ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಜೊತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ನಮ್ಮನ್ನು ದಿಲ್ಲಿಗೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ವರಿಷ್ಠರ ಮಾರ್ಗದರ್ಶನ ಪಡೆಯಲು ದಿಲ್ಲಿಗೆ ಹೋಗುತ್ತಿದ್ದೇನೆ. ಇದೇ ವೇಳೆ ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ನೇಮಕ ಕುರಿತು ಚರ್ಚೆ ನಡೆಸುತ್ತೇವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದಿನ ವಾರ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಅವರ ಭೇಟಿ ಬಳಿಕ ಪದಾಧಿಕಾರಿಗಳ ಪಟ್ಟಿ ಅಂತಿಮಗೊಳ್ಳುತ್ತದೆ ಎಂದು ಅವರು ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News