ಸಿಎಂ ಬದಲಾವಣೆಯಾದರೆ, ಮುಂದಿನ ಮುಖ್ಯಮಂತ್ರಿ ನಾನೇ: ಸಚಿವ ಉಮೇಶ್ ಕತ್ತಿ

Update: 2021-07-19 15:28 GMT

ಬೆಳಗಾವಿ, ಜು. 19: `ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಒಂದು ವೇಳೆ ಸಿಎಂ ಸ್ಥಾನ ಖಾಲಿಯಾದರೆ ನಾನೇ ಮುಖ್ಯಮಂತ್ರಿ ಆಗಲಿದ್ದೇನೆ. ಒಂದು ವೇಳೆ ಬದಲಾವಣೆಯಾದರೂ ನಂತರದ ನಂಬರ್ ನನ್ನದೇ' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದ ಸಭೆಗೆ ಬಂದಿದ್ದೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇದ್ದು, ಅವರ ನೇತೃತ್ವದ ಸರಕಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಿಎಂ ಬದಲಾವಣೆ ಕೂಗಿದೆ. ಆದರೆ, ಅದು ಯಾರೂ ಬದಲಾಯಿಸುತ್ತಾರೋ ನನಗೆ ಗೊತ್ತಿಲ್ಲ' ಎಂದು ಸ್ಪಷ್ಟಣೆ ನೀಡಿದರು.

ನನಗೂ ಎಲ್ಲ ಯೋಗ್ಯತೆಗಳಿವೆ: `ಹುಕ್ಕೇರಿ ಮತಕ್ಷೇತ್ರದ ಜನತೆ ನನ್ನನ್ನು ಎಂಟು ಬಾರಿ ಶಾಸಕನಾಗಿ ಆಯ್ಕೆ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಂಟು ಬಾರಿ ಶಾಸಕನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು. ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲ ಯೋಗ್ಯತೆಗಳು ನನ್ನಲ್ಲಿ ಇವೆ. ಯಾವುದೇ ರೀತಿಯ ಕಳಂಕವಿಲ್ಲದ ವ್ಯಕ್ತಿತ್ವ ನನ್ನದು' ಎಂದು ಉಮೇಶ್ ಕತ್ತಿ ಇದೇ ವೇಳೆ ತಿಳಿಸಿದರು.

`ರಾಜ್ಯದ ಜನತೆಯ ಆಶೀರ್ವಾದ, ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದರೆ, ನನ್ನ ನಸೀಬು ಗಟ್ಟಿ ಇದ್ದರೆ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಕೊಂಡಿದ್ದೇನೆ. ಯಾರೇ ಮುಖ್ಯಮಂತ್ರಿಯಾದರೂ ಅಖಂಡ ರಾಜ್ಯ ಆಳಬೇಕು. ಆದರೆ, ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಹೀಗಾಗಿ ಸಿಎಂ ಸ್ಥಾನದ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟಪಡುವುದಿಲ್ಲ' ಎಂದು ಉಮೇಶ್ ಕತ್ತಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News