250 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬದಲಾವಣೆ ಕಾಣಲಿರುವ ರಕ್ಷಣಾ ಭೂ ನೀತಿ

Update: 2021-07-19 17:03 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜು.19: ಪ್ರಮುಖ ರಕ್ಷಣಾ ಭೂ ಸುಧಾರಣೆ ಕ್ರಮದಲ್ಲಿ ನರೇಂದ್ರ ಮೋದಿ ಸರಕಾರವು ಸಾರ್ವಜನಿಕ ಯೋಜನೆಗಳು ಮತ್ತು ಇತರ ಮಿಲಿಟರಿಯೇತರ ಚಟುವಟಿಕೆಗಳಿಗಾಗಿ ಸ್ವಾಧೀನ ಪಡಿಸಿಕೊಂಡ ಸಶಸ್ತ್ರ ಪಡೆಗಳ ಭೂಮಿಗೆ ಪ್ರತಿಯಾಗಿ ಅವುಗಳಿಗೆ ಸಮಾನ ಮೌಲ್ಯದ ಮೂಲಸೌಕರ್ಯ(ಇವಿಐ) ಅಭಿವೃದ್ಧಿಗೆ ಅವಕಾಶ ಕಲ್ಪಿಸುವ ನೂತನ ನಿಯಮಗಳಿಗೆ ಒಪ್ಪಿಗೆಯನ್ನು ನೀಡಿದೆ.

ಈ ಹಿಂದೆ 1765ರಲ್ಲಿ ಬ್ರಿಟಿಷರು ಬಂಗಾಳದ ಬರಾಕ್ಪೋರದಲ್ಲಿ ಮೊದಲ ದಂಡುಪ್ರದೇಶವನ್ನು ಸ್ಥಾಪಿಸಿದಾಗಿನಿಂದ ಭಾರತದಲ್ಲಿ ಮಿಲಿಟರಿಯನ್ನು ಹೊರತುಪಡಿಸಿ ಇತರ ಯಾವುದೇ ಉದ್ದೇಶಕ್ಕಾಗಿ ರಕ್ಷಣಾ ಭೂಮಿಯನ್ನು ಬಳಸುವುದನ್ನು ನಿಷೇಧಿಸಲಾಗಿತ್ತು. ಬಳಿಕ 1801,ಎಪ್ರಿಲ್ನಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್-ಇನ್-ಕೌನ್ಸಿಲ್ ಅವರು,‌ ಸೇನೆಗೆ ಸೇರಿರದ ಯಾವುದೇ ವ್ಯಕ್ತಿಯು ಯಾವುದೇ ದಂಡು ಪ್ರದೇಶದಲ್ಲಿಯ ಬಂಗಲೆಗಳು ಅಥವಾ ಕ್ವಾರ್ಟರ್ಸ್ ಅನ್ನು ಮಾರಾಟ ಮಾಡುವಂತಿಲ್ಲ ಅಥವಾ ವಶದಲ್ಲಿಟ್ಟುಕೊಳ್ಳುವಂತಿಲ್ಲ ಎಂದು ಆದೇಶಿಸಿದ್ದರು.

ಸರಕಾರವು ರಕ್ಷಣಾ ಭೂ ಸುಧಾರಣೆಗಳನ್ನು ಪರಿಗಣಿಸುತ್ತಿರುವುದರಿಂದ ಮತ್ತು ದಂಡುಪ್ರದೇಶ ವಲಯಗಳ ಅಭಿವೃದ್ಧಿಯನ್ನು ಉದ್ದೇಶಿಸಿರುವ ದಂಡುಪ್ರದೇಶ ಮಸೂದೆ 2020ನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿರುವದರಿಂದ 2021ರಲ್ಲಿ ಈ ನೀತಿಯು ಬದಲಾವಣೆಗೊಂಡಿದೆ.

ಮೆಟ್ರೋ ಕಟ್ಟಡ, ರಸ್ತೆಗಳು, ರೈಲ್ವೆ ಮತ್ತು ಫ್ಲೈಓವರ್ಗಳಂತಹ ಪ್ರಮುಖ ಸಾರ್ವಜನಿಕ ಯೋಜನೆಗಳಿಗೆ ಅಗತ್ಯ ರಕ್ಷಣಾ ಭೂಮಿಯನ್ನು ಸಮಾನ ಮೌಲ್ಯದ ಭೂಮಿಯ ವಿನಿಮಯ ಅಥವಾ ಭೂಮಿಯ ಮರುಕಟ್ಟೆ ಬೆಲೆಯನ್ನು ಪಾವತಿಯನ್ನು ಮಾಡಿಯೇ ಪಡೆಯಬೇಕಾಗುತ್ತದೆ ಎಂದು ಅನಾಮಿಕರಾಗಿರಲು ಬಯಸಿರುವ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನೂತನ ನಿಯಮಗಳಡಿ ಎಂಟು ಇವಿಐ ಯೋಜನೆಗಳನ್ನು ಗುರುತಿಸಲಾಗಿದ್ದು, ಭೂಮಿಯನ್ನು ಪಡೆಯುವ ಸಂಸ್ಥೆಯು ಸಂಬಂಧಿಸಿದ ಸಶಸ್ತ್ರ ಪಡೆಯ ಸಮನ್ವಯದೊಂದಿಗೆ ಮೂಲಸೌಕರ್ಯವನ್ನು ಒದಗಿಸಬೇಕಾಗುತ್ತದೆ. ಯೂನಿಟ್ಗಳು ಮತ್ತು ರಸ್ತೆಗಳ ನಿರ್ಮಾಣ, ಇತರ ಯೋಜನೆಗಳು ಇವುಗಳಲ್ಲಿ ಸೇರಿವೆ.

ನೂತನ ನಿಯಮಗಳಂತೆ ದಂಡುಪ್ರದೇಶ ವಲಯಗಳಡಿಯ ಪ್ರಕರಣಗಳಲ್ಲಿ ಭೂಮಿಯ ಮೌಲ್ಯವನ್ನು ಸ್ಥಳೀಯ ಮಿಲಿಟರಿ ಅಧಿಕಾರಿಯ ನೇತ್ರತ್ವದ ಸಮಿತಿಯು ನಿರ್ಧರಿಸುತ್ತದೆ. ದಂಡುಪ್ರದೇಶಗಳ ಹೊರಗಿನ ಭೂಮಿಯ ಮೌಲ್ಯವನ್ನು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆ.
ಉದ್ದೇಶಿತ ರದ್ದುಗೊಳ್ಳದ ರಕ್ಷಣಾ ಆಧುನೀಕರಣ ನಿಧಿಗೆ ಆದಾಯವನ್ನು ಸೃಷ್ಟಿಸುವ ಏಕೈಕ ಮಾರ್ಗವಾಗಿ ರಕ್ಷಣಾ ಭೂಮಿಯ ನಗದೀಕರಣವನ್ನು ವಿತ್ತ ಸಚಿವಾಲಯವು ಪ್ರಸ್ತಾವಿಸಿತ್ತು.
ರಕ್ಷಣಾ ಆಧುನೀಕರಣ ನಿಧಿಯ ಸ್ಥಾಪನೆಗಾಗಿ ಕರಡು ಸಂಪುಟ ಟಿಪ್ಪಣಿಯು ಹಾಲಿ ಅಂತರ-ಸಚಿವಾಲಯ ಸಮಾಲೋಚನೆಗೊಳಪಟ್ಟಿದ್ದು ಅಂತಿಮ ನಿರ್ಧಾರವನ್ನು ಶೀಘ್ರವೇ ನಿರೀಕ್ಷಿಸಲಾಗಿದೆ. ನಂತರ ಅದನ್ನು ಒಪ್ಪಿಗೆಗಾಗಿ ಕೇಂದ್ರ ಸಂಪುಟಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
 
ದೇಶಾದ್ಯಂತ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ರಕ್ಣಣಾ ಇಲಾಖೆಗೆ ಸೇರಿದ ಭೂಮಿಗಳಿದ್ದು,ಅಭಿವೃದ್ಧಿ ಚಟುವಟಿಕೆಗಾಗಿ ಇವುಗಳನ್ನು ಬಳಸಿಕೊಳ್ಳುವಮತೆ ವರ್ಷಗಳಿಂದಲೂ ರಾಜಕಾರಣಿಗಳು ಮತ್ತುಪೌರ ಅಧಿಕಾರಿಗಳು ಆಗ್ರಹಿಸುತ್ತಿದ್ದರು. ಈ ಆಗ್ರಹ ಈಗ ಈಡೇರುವಂತೆ ಕಂಡು ಬರುತ್ತಿದೆ ಎಂದು ಲೆ.ಜ.(ನಿವೃತ್ತ) ಎಚ್.ಎಸ್.ಪನಾಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News