ಪ್ರಧಾನಿ ಮೋದಿ ಭೇಟಿ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು, ಜು. 19: ರಾಜ್ಯದಲ್ಲಿ `ನಾಯಕತ್ವ ಬದಲಾವಣೆ' ಸುತ್ತಲಿನ ಚರ್ಚೆಯ ನಡುವೆಯೇ ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ.
ಸೋಮವಾರ ಬೆಳಗ್ಗೆ ಹೊಸದಿಲ್ಲಿಗೆ ತೆರಳಿದ ನೂತನ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಪ್ರಧಾನಿ ಕಾರ್ಯಾಲಯಕ್ಕೆ ಭೇಟಿ ನೀಡಿದರು. ಮೋದಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಗೆಹ್ಲೋಟ್ ಸಂಪುಟ ಪುನಾರಚನೆ ವೇಳೆ ಸ್ಥಾನ ಕಳೆದುಕೊಂಡಿದ್ದರು. ನಂತರ ಅವರನ್ನು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ನೇಮಿಸಲಾಗಿತ್ತು.
ಸಚಿವ ಸಂಪುಟದಿಂದ ಹೊರ ನಡೆದ ನಂತರ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಮೋದಿಯನ್ನು ಭೇಟಿಯಾಗಲು ಸಾಧ್ಯವಾಗದೆ ಗೆಹ್ಲೋಟ್ ರಾಜ್ಯಕ್ಕೆ ಆಗಮಿಸಿ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಹೀಗಾಗಿ ಇದೀಗ ಹೊಸದಿಲ್ಲಿಗೆ ತೆರಳಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.