ಬಕ್ರೀದ್ ಆಚರಣೆ ವೇಳೆ ಜಾನುವಾರು ಸಾಗಾಟ ನಿಷೇಧಿಸಿರುವ ಜಿಲ್ಲಾಧಿಕಾರಿ ಆದೇಶ ಕಾನೂನುಬಾಹಿರ: ಎಸ್.ಡಿ.ಪಿ.ಐ
ಬೆಂಗಳೂರು, ಜು.19: ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ಆಚರಣೆ ವೇಳೆ ಜಾನುವಾರು ಸಾಗಾಟ ನಿಷೇಧಿಸಿ ಗುಲ್ಬರ್ಗ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶವು ಕಾನೂನುಬಾಹಿರವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಅಬ್ದುಲ್ ಮಜೀದ್ ಖಾನ್ ಹೇಳಿದ್ದಾರೆ.
ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ 2020ರ ಪ್ರಕಾರ 13 ವರ್ಷ ಮೇಲ್ಪಟ್ಟ ಜಾನುವಾರುಗಳ ಸಾಗಾಟಕ್ಕೆ ಯಾವುದೇ ನಿಬರ್ಂಧವಿಲ್ಲ. ಪಶು ವೈದ್ಯಾಧಿಕಾರಿಯವರಿಂದ ದೃಢೀಕರಣ ಪತ್ರ ಪಡೆದು ಜಾನುವಾರುಗಳನ್ನು ಸಾಗಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಆದೇಶವು ಈ ಕಾಯ್ದೆಯ ಉಲ್ಲಂಘನೆಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ಗೋ ಹತ್ಯೆ ನಿಷೇಧ ಕಾಯ್ದೆ 2020ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‍ನಲ್ಲಿ ಈಗಾಗಲೇ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲು ಹಾಗೂ ಇನ್ನಿತರರು ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ಮಜೀದ್ ಖಾನ್ ಹೇಳಿದ್ದಾರೆ.
ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಹೈ ಕೋರ್ಟ್ ಅಡ್ವೊಕೇಟ್ ಜನರಲ್, ‘ಗೋಹತ್ಯೆ ನಿಷೇಧ ಕಾಯ್ದೆ 2020’ರ ಮುಂದಿನ ನಿಯಮಗಳನ್ನು ರೂಪಿಸುವವರೆಗೆ ‘ಗೋವುಗಳ ಸಾಗಾಟ ಮತ್ತು ಹತ್ಯೆಯ ನಿಷೇಧವಿರುವ ಸೆಕ್ಷನ್ 5ರ ಕಾನೂನನ್ನು ಅನುಷ್ಠಾನಗೊಳಿಸುವುದಿಲ್ಲ’ ಎಂದು ಈಗಾಗಲೇ ಮುಖ್ಯ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಹಾಗಾಗಿ ಬಕ್ರೀದ್ ಹಬ್ಬದ ಪ್ರಯುಕ್ತ ಜಾನುವಾರು ಸಾಗಾಟಕ್ಕೆ ಪ್ರಸಕ್ತ ಕಾಯ್ದೆಯ ಪ್ರಕಾರ ಯಾವುದೇ ತೊಡಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದುದರಿಂದ, ಜಿಲ್ಲಾಧಿಕಾರಿಯವರು ತಮ್ಮ ಆದೇಶವನ್ನು ತಕ್ಷಣ ಹಿಂಪಡೆದು ಕಾನೂನು ಪ್ರಕಾರ ಜಾನುವಾರುಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಬೇಕು. ಹಾಗೆಯೇ ಸರಕಾರ ಮತ್ತು ರಾಜ್ಯದ ಪೊಲೀಸ್ ಇಲಾಖೆ ಜಾನುವಾರು ಸಾಗಾಟದ ವೇಳೆ ಯಾವುದೇ ಸಮಸ್ಯೆ ಎದುರಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಬ್ದುಲ್ ಮಜೀದ್ ಖಾನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.