ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆಯಾಗಿದೆ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತಾ

Update: 2021-07-20 14:37 GMT

ಬೆಂಗಳೂರು, ಜು.20: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಮೂರನೆ ಅಲೆ ನಿಯಂತ್ರಿಸುವ ನಿಟ್ಟನಲ್ಲಿ ವೈದ್ಯ ಸಮಿತಿಯನ್ನು ರಚಿಸಿದ್ದು, ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆ, ಮಕ್ಕಳ ಆರೋಗ್ಯ ದೃಷ್ಟಿಯಿಂದ ವೈದ್ಯ ತಜ್ಞರ ಸಮಿತಿ ರಚನೆ ಹಾಗೂ ಕೋವಿಡ್ ಲಸಿಕೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇಂಗ್ಲೆಂಡ್‍ನಲ್ಲಿ ಪ್ರತಿನಿತ್ಯ 50ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ಆದರೆ, ಕೋವಿಡ್ ಲಸಿಕೆ ಪಡೆದಿರುವ ಪರಿಣಾಮ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಪ್ರಮಾಣ ಕಡಿಮೆಯಿದೆ. ಹೀಗಾಗಿ ಕೋವಿಡ್ ಲಸಿಕೆಯಿಂದ ರೋಗದ ತೀವ್ರತೆ ಕಡಿಮೆ ಆಗಲಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.52 ಮಂದಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ. ಶೇ.15ರಷ್ಟು ಮಂದಿಗೆ ಎರಡು ಡೋಸ್ ಲಸಿಕೆ ಪೂರ್ಣಗೊಂಡಿದೆ. ಈ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನತೆ ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ಕೋವಿಡ್ ಎರಡನೆ ಅಲೆಯ ಪ್ರಮಾಣ ಕುಸಿಯುತ್ತಿದ್ದು, ಖಾಸಗಿ ಆಸ್ಪತ್ರೆಗಳಿಂದ ಪಡೆಯಲಾಗಿದ್ದ ಕೋವಿಡ್ ಹಾಸಿಗೆಗಳನ್ನು ವಾಪಸ್ ನೀಡಲಾಗುತ್ತಿದೆ. 1800 ಬೆಡ್‍ಗಳನ್ನು ಮಾತ್ರ ಉಳಿಸಿಕೊಂಡು ಉಳಿದವುಗಳನ್ನು ವಾಪಸ್ ಕೊಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳನ್ನು ನೋಡಿಕೊಂಡು ಹಾಸಿಗೆಗಳನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News