×
Ad

ಸಚಿವ ನಿರಾಣಿ ಬಳಿ ಸೀಡಿಗಳ ಗಂಟು ಇದೆ: ಆಲಂ ಪಾಷಾ ಆರೋಪ

Update: 2021-07-20 22:10 IST

ಬೆಂಗಳೂರು, ಜು.20: ಸಚಿವ ಮುರುಗೇಶ್ ನಿರಾಣಿ ಬಳಿ ಸೀಡಿಗಳ ಗಂಟು ಇದೆ. ಅವರಿಗೆ ಆರೂವರೆ ಕೋಟಿ ಜನರ ಬೆಂಬಲ ಸಿಕ್ಕರೆ ಸೀಡಿಗಳ ಸಂಖ್ಯೆ ದ್ವಿಗುಣ ಆಗಲಿದೆ ಎಂದು ದಿ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟಿನ ಸಂಸ್ಥಾಪಕ ಎ.ಆಲಂ ಪಾಷಾ ಆರೋಪಿಸಿದರು.

ಮಂಗಳವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಮುರುಗೇಶ್ ನಿರಾಣಿ ಬಳಿ ಸುಮಾರು 500 ಸೀಡಿಗಳಿವೆ. ಇದು ಯಾರದ್ದೂ ಬೇಕಾದರೂ ಸೀಡಿ ಇರಬಹುದು ಎಂದರು.

ಇನ್ನು, ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿ.ನಲ್ಲಿ ನಿರಾಣಿ ತಮ್ಮ ಪ್ರಭಾವ ಬಳಿಸಿ ಅಕ್ರಮ ಮಾಡಿದ್ದಾರೆ. ಸಣ್ಣ ರೈತರ ಹೆಸರಲ್ಲಿ ಬೆಳೆ ಸಾಲ ಪಡೆಯುತ್ತಿದ್ದಾರೆ. ಆ ಹಣವನ್ನು ನಕಲಿ ಹೆಸರು, ಖಾತೆಯ ಮೂಲಕ ಶ್ರೀ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರ ಲಿ.ನಲ್ಲಿ ಜಮೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.

ರೈತರಿಗೆ ಸಿಗುವ ಶೇ.4ರಷ್ಟು ಬಡ್ಡಿ ಕೃಷಿ ಸಾಲವನ್ನು ರೈತರ ನಕಲಿ ಆದಾರ್ ಕಾರ್ಡ್ ಬಳಸಿ ಪಡೆದಿದ್ದಾರೆ. ಈ ರೀತಿಯಾಗಿ 8 ಸಾವಿರ ಕೋಟಿ ವ್ಯವಹಾರ ನಡೆಸಿದ್ದಾರೆ ಎಂದ ಅವರು, ಸಕ್ಕರೆ ಕಾರ್ಖಾನೆ ಮತ್ತು ರೈತರ ಹೆಸರಲ್ಲಿ ವಂಚನೆಯಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ದೂರಿದರು.

ಮತ್ತೊಂದೆಡೆ ನಿರಾಣಿ ಒಡೆತನದ ಮುಧೋಳದ ಸಕ್ಕರೆ ಕಾರ್ಖಾನೆ ಅಕ್ರಮವಾಗಿ ಸ್ಥಾಪನೆಯಾಗಿದೆ. ನಿರಾಣಿ ಶುಗರ್ಸ್‍ನಲ್ಲಿ ಬಾಯ್ಲರ್ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿದ್ದರು. ಇದರ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದ ಅವರು, ಮುರುಗೇಶ್ ನಿರಾಣಿಗೂ ಕೆಲವರು ಸೀಡಿ ಇದೆ ಎಂದು ಹೆದರಿಸಿದ್ದಾರೆ. ಹೀಗಾಗಿಯೇ, ಅವರು ಕೋರ್ಟ್‍ನಿಂದ ತಡೆಯಾಜ್ಞೆ ತರುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News