ಸಪ್ತಪದಿ ಸರಳ ವಿವಾಹೋತ್ಸವ ಪುನರಾರಂಭ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-07-21 17:22 GMT

ಶಿವಮೊಗ್ಗ, ಜು. 21: ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯು ಕೊರೋನ ಸೋಂಕಿನ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಸಪ್ತಪದಿ ಮಹತ್ವಾಕಾಂಕ್ಷಿ ಯೋಜನೆಯನ್ನು ಪುನರಾರಂಭಗೊಳಿಸಲು ಉದ್ದೇಶಿಸಿದ್ದು, ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದಲೇ ಸರಳ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ರಾಜ್ಯ ಮುಜರಾಯಿ ಮತ್ತು ದಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಮದುವೆಯಾಗುವ ವಧುವಿಗೆ ರೂ. 40,000 ಗಳ ಮೌಲ್ಯದ ಚಿನ್ನ ನೀಡಲಾಗುವುದಲ್ಲದೆ ವಧುವಿಗೆ 10,000 ರೂ.ಗಳ ನಗದು ಮತ್ತು ಧಾರೆ ಸೀರೆ ಮತ್ತು ವರನಿಗೆ ರೂ.೫,೦೦೦ ಗಳ ನಗದು ಹಣವನ್ನು ನೀಡಲಾಗುವುದು ಎಂದರು.   

ಈ ಮಂಗಳ ಕಾರ್ಯಗಳಿಗೆ ಈಗಾಗಲೆ ಮುಹೂರ್ತಗಳನ್ನು ನಿಗಧಿಪಡಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಜನಸಾಮಾನ್ಯರು ಇತ್ತೀಚಿನ ದಿನಗಳಲ್ಲಿ ಆಡಂಬರದ ಮದುವೆಗಿಂತ ಸರಳ ಮದುವೆಗಳತ್ತ ಮನಸು ಮಾಡುತ್ತಿದ್ದಾರೆ. ಇದರಿಂದಾಗಿ ಕಾರ್ಯಕ್ರಮಕ್ಕೆ ಮಹತ್ವ ಹೆಚ್ಚಾಗಿದೆ ಎಂದರು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ದೇವಸ್ಥಾನದ ಸರ್ವಾಂಗೀಣ ವಿಕಾಸಕ್ಕೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಲು ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಈ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ಜಿಲ್ಲೆಗೆ ಅಗತ್ಯವಾಗಿರುವ ಹಾಗೂ ಅರ್ಚಕರ ಕೋರಿಕೆಯಂತೆ ವಸತಿಯುಕ್ತ ಆಗಮ ವೇದ ಪಾಠಶಾಲೆಯನ್ನು ಮಂಜೂರು ಮಾಡಲು ಉದ್ದೇಶಿಸಲಾಗಿದೆ. ಈ ವೇದಾದ್ಯಯನ ಶಾಲೆಯು ಆಗಸ್ಟ್-ಡಿಸೆಂಬರ್ ಮಾಹೆಯೊಳಗಾಗಿ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಧಾರ್ಮಿಕ ಕೇಂದ್ರವೆಂದೇ ಗುರುತಿಸಲಾಗಿರುವ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿ ಭಕ್ತಾಧಿಗಳ ಅನುಕೂಲಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವ ಸಂಬಂಧ ಶೀಘ್ರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಮೇಯರ್  ಸುನಿತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ  ಅನುರಾಧ ಜಿ., ಚನ್ನಬಸಪ್ಪ, ಜ್ಞಾನೇಶ್ವರ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News