ಸಿಎಂ ಬಿಎಸ್ ವೈ ಬದಲಾವಣೆಗೆ ಆರೆಸೆಸ್ಸ್ ಚಿತಾವಣೆ ಕಾರಣ: ಸಂಗನಬಸವ ಸ್ವಾಮೀಜಿ

Update: 2021-07-21 17:52 GMT

ಬೆಂಗಳೂರು, ಜು. 21: `ಆರೆಸೆಸ್ಸ್ ನ ಜಾತಿವಾದಿಗಳು ತಮ್ಮ ಹಠ ಸಾಧನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬದಲಾಯಿಸಲು ಮುಂದಾಗಿದ್ದಾರೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಅವರ ಆಟ ನಡೆಯುವುದಿಲ್ಲ' ಎಂದು ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ವಿಜಯನಗರ(ಹೊಸಪೇಟೆ)ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಆರೆಸೆಸ್ಸ್ ಮುಖಂಡರ ಮಾತು ಕೇಳಿಕೊಂಡೇ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸೇರಿದವರನ್ನು ಸಿಎಂ ಮಾಡಿದ್ದರು. ಆದರೆ, ಅದು ಸರಿಯಾಗಿ ನಡೆಯಲಿಲ್ಲ. ಬೇರೆ ಕಡೆ ಆರೆಸೆಸ್ಸ್ ಮಾತು ನಡೆಯಬಹುದು. ಆದರೆ, ಕರ್ನಾಟಕ ರಾಜ್ಯದಲ್ಲಿ ಅದು ಸಾಧ್ಯವಿಲ್ಲ. ಯಡಿಯೂರಪ್ಪನವರನ್ನು ಬದಲಿಸಿದರೆ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ' ಎಂದು ಎಚ್ಚರಿಸಿದರು.

`ರಾಜ್ಯದಲ್ಲಿನ ವೀರಶೈವ ಲಿಂಗಾಯತರು ಸಮುದಾಯದವರು ಎಂದೂ ಆರೆಸೆಸ್ಸ್ ಜೊತೆಗೆ ಹೋಗುವುದಿಲ್ಲ. ನಾವೆಲ್ಲ ಯಡಿಯೂರಪ್ಪನವರ ಜತೆಗೆ ಹೋಗುತ್ತಿದ್ದೇವೆ. ಲಿಂಗಾಯತರು ಯಾವುದೇ ಆತ್ಮವಂಚನೆ ಮಾಡಿಕೊಳ್ಳುತ್ತಿಲ್ಲ. ಪ್ರಲ್ಹಾದ್ ಜೋಶಿ ಅವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಆರೆಸೆಸ್ಸ್ ಚಿತಾವಣೆಯೆ ಕಾರಣ. ನಾಯಕತ್ವ ಬದಲಾವಣೆ ಇಲ್ಲ ಎಂದು ವರಿಷ್ಟರು ಸ್ಪಷ್ಟಣೆ ನೀಡಬೇಕು ಎಂದು ಶ್ರೀಗಳು ಆಗ್ರಹಿಸಿದರು.

`ಕೋವಿಡ್ ಸಂಕಷ್ಟ, ಪ್ರವಾಹ ಪರಿಸ್ಥಿತಿಯನ್ನು ಯಡಿಯೂರಪ್ಪ ಬಹಳ ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ರಾಜ್ಯದ ಪ್ರತಿಯೊಂದು ಊರುಗಳಲ್ಲಿ ಲಿಂಗಾಯತ ಸಮಾಜದ ಮಠಗಳಿವೆ. ಸಮಾಜಕ್ಕೆ ಅವುಗಳ ದೊಡ್ಡ ಕೊಡುಗೆ ಇದೆ ಎಂದ ಸ್ವಾಮೀಜಿ. ಯಡಿಯೂರಪ್ಪ ಎಲ್ಲ ಧರ್ಮೀಯರನ್ನು ಸಮಾನರಾಗಿ ಕಾಣುತ್ತಾರೆ. ಹಿಂದುಳಿದವರನ್ನು ಪ್ರೀತಿಯಿಂದ ನೋಡುತ್ತಾರೆ. ಹೀಗಿರುವಾಗ ಅವರನ್ನು ಬದಲಿಸುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News