ಭೂ ಮಂಜೂರಾತಿ ನೀಡಲು ಆಗ್ರಹಿಸಿ ಶಿಕಾರಿಪುರದಲ್ಲಿ ಜುಲೈ 22ರಂದು ಬೃಹತ್ ಪ್ರತಿಭಟನೆ

Update: 2021-07-21 17:47 GMT

ಶಿವಮೊಗ್ಗಜು.21: ರೈತರಿಗೆ ಕಾನೂನಿನ ಅಡಿ ಭೂ ಮಂಜೂರಾತಿ ನೀಡಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಶಿಕಾರಿಪುರ ತಾಲ್ಲೂಕಿನ ಬಸವಾಪುರ ಬೇಚಾರ್ ಗ್ರಾಮದ ರೈತರ  ಹಿತರಕ್ಷಣಾ ಅಭಿವೃದ್ಧಿ ಸಂಘದ ವತಿಯಿಂದ ಜು.೨೨ರಂದು  ಶಿಕಾರಿಪುರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜೆ. ಜಯಪ್ಪ ಅವರು , ಶಿಕಾರಿಪುರ ತಾಲೂಕಿನಲ್ಲಿ ಭೂಮಿ ಹಕ್ಕಿಗಾಗಿ ರೈತರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಬಸವಾಪುರ ಬೇಚಾರ್ ಗ್ರಾಮದ ಸರ್ವೆ ನಂ. 1 ರಿಂದ 20 ವರೆಗಿನ ಭೂಮಿ ರೆವಿನ್ಯೂ ಭೂಮಿಯಾಗಿದ್ದು, ಅರಣ್ಯ ಇಲಾಖೆಯವರು ಬಲವಂತವಾಗಿ ರೈತರನ್ನು ಒಕ್ಕಲೆಬ್ಬಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
1998–99 ರಲ್ಲಿ ಬಗರ್ ಹುಕುಂ ಕಾಯ್ದೆಯಡಿಯಲ್ಲಿ ಫಾರಂ ನಂ.೫೩ರ ಅರ್ಜಿಯನ್ನು ರೈತರು ಹಾಕಿದ್ದಾರೆ. 1997ರಿಂದ ಈ ಭೂಮಿಯನ್ನು ಸಾಗುವಳಿ ಮಾಡಿರುವ ರೈತರು ಭೂ ಮಂಜೂರಾತಿಗಾಗಿ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಹಾಗೂ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಅರ್ಜಿಗಳನ್ನು ಹಲವಾರು ವರ್ಷಗಳಿಂದ ತಹಶೀಲ್ದಾರ್ ಅವರು ವಿಲೇವಾರಿ ಮಾಡದೆ ಹಾಗೂ ಸೂಕ್ತ ಕಾರಣನೀಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಇದನ್ನು ವಿರೋಧಿಸಿ ಜು.22 ರಂದು  ಬೆಳಿಗ್ಗೆ 10 ಗಂಟೆಗೆ ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟು ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಕಛೇರಿ ಮುಂಭಾಗ ಸಂಕೇತಿಕ ಪ್ರತಿಭಟನಾ ಧರಣಿ ನಡೆಸಿ ಸಂಜೆ 4 ಗಂಟೆಗೆ ಸರ್ಕಾರಕ್ಕೆ ಹಕ್ಕೋತ್ತಾಯದ ಮನವಿ ಸಲ್ಲಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಧು ಆನವಟ್ಟಿ, ಅಮೃತ್‌ರಾಸ್, ತಿರುಕಪ್ಪ, ಘನಶಾಮ್ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News