ಭ್ರಷ್ಟಾಚಾರದ ಆರೋಪವಿಲ್ಲದ, ಉತ್ತರ ಕರ್ನಾಟಕ ಭಾಗದವರನ್ನು ಸಿಎಂ ಮಾಡಿ: ಬಸವ ಜಯಮೃತ್ಯುಂಜಯ ಸ್ವಾಮಿ
ಬೆಂಗಳೂರು, ಜು. 22: `ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್ ಸೂಚಿಸಿದರೆ, ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ, ಭ್ರಷ್ಟಾಚಾರದ ಆರೋಪವಿಲ್ಲದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬೇಕು' ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ತಮ್ಮದು ತಟಸ್ಥ ನಿಲುವು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟು(2ಎ) ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದು, ಅವರು ಅಧಿಕಾರದಿಂದ ಕೆಳಗಿಳಿಯುವ ಮುನ್ನ ಭರವಸೆ ಈಡೇರಿಸಬೇಕು' ಎಂದು ಒತ್ತಾಯಿಸಿದರು.
`ಪಂಚಮಸಾಲಿ ಸಮುದಾಯಕ್ಕೆ ಒಬಿಸಿ `2ಎ' ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಪಾದಯಾತ್ರೆ, ಸಮಾವೇಶ ನಡೆಸಿದ್ದೆವು. ಮುಂದಿನ 6 ತಿಂಗಳಿನಲ್ಲಿ ಮೀಸಲಾತಿ ಕಲ್ಪಿಸುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಭುಗಿಲೆದ್ದಿದೆ. ಮುಖ್ಯಮಂತ್ರಿ ಬದಲಾದರೆ, ಮೀಸಲಾತಿ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ತಮ್ಮ ಬೇಡಿಕೆಯನ್ನು ಈಡೇರಿಸಬೇಕು' ಎಂದು ಶ್ರೀಗಳು ಹೇಳಿದರು.
`ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಒಬಿಸಿ ಪ್ರವರ್ಗ-2ಎ ಪಟ್ಟಿಗೆ ಸೇರ್ಪಡೆ ಸಂಬಂಧ ಸರಕಾರಕ್ಕೆ ತ್ವರಿತ ಗತಿಯಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಅವರು ಶೀಘ್ರವಾಗಿ ವರದಿ ಸಲ್ಲಿಸುವ ಭರವಸೆ ನೀಡಿದ್ದು, ಸಮುದಾಯಕ್ಕೆ ಮೀಸಲಾತಿ ದೊರೆಯುವ ನಿರೀಕ್ಷೆ ಇದೆ ಎಂದು ಸ್ವಾಮೀಜಿ ತಿಳಿಸಿದರು.