ಮಕ್ಕಳ ಸುರಕ್ಷತೆಗಾಗಿ ಶಾಲಾ ಸಿಬ್ಬಂದಿಗೆ ಕೋವಿಡ್ ಲಸಿಕೆ: ಸಚಿವ ಡಾ.ಕೆ.ಸುಧಾಕರ್

Update: 2021-07-22 13:14 GMT

ಬೆಂಗಳೂರು, ಜು. 22: `ಯಾವುದೋ ಒಂದು ದಿನ ಶಾಲೆಗಳನ್ನು ಆರಂಭಿಸಬೇಕಾಗುತ್ತದೆ. ಇದಕ್ಕೆ ಸಿದ್ಧತೆಯಾಗಿ ಶಾಲೆಗಳ ಎಲ್ಲ ಸಿಬ್ಬಂದಿಗೆ ಆದ್ಯತೆಯಲ್ಲಿ ಕೋವಿಡ್-19 ಲಸಿಕೆ ನೀಡಲಾಗುತ್ತದೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ಶಾಲೆಗಳನ್ನು ಯಾವುದೋ ಒಂದು ದಿನ ಆರಂಭಿಸಲೇಬೇಕು. ಮಕ್ಕಳು ಯಾವಾಗಲೂ ಆನ್‍ಲೈನ್ ತರಗತಿಯ ಮುಂದೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆನ್‍ಲೈನ್ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಪಾಯವಿದೆ. ಆದುದರಿಂದ ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.

`ಪರಿಣಿತರ ಅಭಿಪ್ರಾಯ, ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುತ್ತದೆ. ಶಾಲೆಯ ಸಿಬ್ಬಂದಿ ವರ್ಗವನ್ನು ವಿಶೇಷ ಗುಂಪಾಗಿ ಪರಿಗಣಿಸಿ ಅವರಿಗೆ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭಿಸಬೇಕೆಂದು ತೀರ್ಮಾನಿಸಲಾಗಿದೆ. ಮಕ್ಕಳ ಪೋಷಕರಿಗೆ, ಕುಟುಂಬದವರಿಗೆ ಲಸಿಕೆ ನೀಡಲಾಗಿದೆ. ಇನ್ನೂ ಕೆಲ ದಿನಗಳು ಕಳೆದರೆ ಲಸಿಕೆ ಪಡೆದವರ ಸಂಖ್ಯೆ 3 ಕೋಟಿಗೆ ತಲುಪಲಿದೆ. ಅನೇಕರಿಗೆ ಪಾಸಿಟಿವ್ ಬಂದು ಹೋಗಿ ಅವರಲ್ಲಿ ಅಂಟಿಬಾಡಿ ಉತ್ಪಾದನೆಯಾಗಿರುವುದೂ ಇದೆ' ಎಂದು ಡಾ.ಸುಧಾಕರ್ ಹೇಳಿದರು.

`ವೈದ್ಯಕೀಯ ಶಿಕ್ಷಣ ಕಾಲೇಜುಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಉನ್ನತ ಶಿಕ್ಷಣದಲ್ಲಿ ಕಾಲೇಜು ಆರಂಭಿಸಲು ತೀರ್ಮಾನಿಸಲಾಗುತ್ತಿದೆ. ಇದೇ ರೀತಿ ಹಂತ ಹಂತವಾಗಿ ನೋಡಿಕೊಂಡು ಈ ಬಗ್ಗೆ ತೀರ್ಮಾನಿಸಲಾಗುತ್ತದೆ. ಇಂತಹ ತೀರ್ಮಾನವನ್ನು ಬಹಳ ಎಚ್ಚರದಿಂದ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
`ರಾಜ್ಯದಲ್ಲಿ ಪ್ರತಿದಿನ ಒಟ್ಟು ಪ್ರಕರಣಗಳಲ್ಲಿ ಶೇ.5ರಷ್ಟನ್ನು ಹೊಸ ವೈರಾಣು ಅಧ್ಯಯನಕ್ಕೆ ಒಳಪಡಿಸಿ ಪರೀಕ್ಷಿಸಲಾಗುತ್ತಿದೆ. ಈ ಮಾಹಿತಿಯನ್ನು ಐಸಿಎಂಆರ್ ಜೊತೆ ಹಂಚಿಕೊಳ್ಳಲಾಗುತ್ತಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಡಾ.ಸುಧಾಕರ್ ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News