ಕಳಸ: ಭಾರೀ ಮಳೆಗೆ ರಸ್ತೆ, ಸೇತುವೆ ಸೇರಿ ಅಲ್ಲಲ್ಲಿ ಭೂಕುಸಿತ
ಕಳಸ, ಜು.22: ತಾಲೂಕಿನಾದ್ಯಂತ ಗುರುವಾರ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತ, ಗುಡ್ಡ ಕುಸಿತದಂತಹ ಘಟನೆಗಳು ಜರುಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಗಾಳಿಯೊಂದಿಗೆ ಬಿರುಸಿನ ಮಳೆಯಾಗುತ್ತಿದ್ದು ಭದ್ರಾ ನದಿಯಲ್ಲಿ ನೀರಿನ ಮಟ್ಟ ಈ ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಪರಿಣಾಮ ಗುರುವಾರ ಕಳಸ-ಹೊರನಾಡು ಮಧ್ಯೆ ಭದ್ರಾ ನದಿಗೆ ಕಟ್ಟಿರುವ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿತ್ತು. ಬೆಳಗ್ಗಿನಿಂದ ನಿರಂತರ ಸುರಿಯುತ್ತಿದ್ದ ಮಳೆಯ ಪರಿಣಾಮ ಮದ್ಯಾಹ್ನವಾಗುತ್ತಿದ್ದಂತೆ ಸೇತುವೆ ಮೇಲೆ ನೀರು ಹರಿಯಿತು. ಇದರಿಂದ ಸಂಜೆಯ ವರೆಗೆ ಕಳಸ-ಹೊರನಾಡು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಬೇರೆ ಜಿಲ್ಲೆಗಳಿಂದ ಕಳಸ ಮಾರ್ಗವಾಗಿ ಹೊರನಾಡು ದೇವಾಲಯಕ್ಕೆ ಬಂದಿದ್ದ ನೂರಾರು ಪ್ರವಾಸಿರು ಸಮಸ್ಯೆ ಎದುರಿಸಿದರು. ಸದ್ಯ ಹೆಬ್ಬಾಳೆ ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇದಿಸಿದ್ದು, ಪೊಲೀಸರು ಸ್ಥಳದಲಿ ಬೀಡು ಬಿಟ್ಟಿದ್ದಾರೆ.
ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅಬ್ಬುಗುಡಿಗೆ-ಕಲ್ಲುಗೋಡು ಸಂಪರ್ಕಿಸುವ ರಸ್ತೆಯಲ್ಲಿರುವ ಮೋರಿಯೊಂದು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಅದನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಆದರೆ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನಿರ್ಮಾಣ ಹಂತದಲ್ಲಿದ್ದ ಈ ಕಿರು ಸೇತುವೆ ಸಂಪೂರ್ಣ ಕೊಚ್ಚಿ ಹೋಗಿ ಕಳಸ-ಕಲ್ಗೋಡು ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹೊರನಾಡು ಸಮೀಪದ ಗೀಕ್ ತೋಟ ಗ್ರಾಮಕ್ಕೆ ಹೋಗುವ ರಸ್ತೆಯು ಕುಸಿದು ಹೋಗಿದ್ದು, ಆ ಗ್ರಾಮದ 70 ಕುಟುಂಬಗಳು ಸಂಪೂರ್ಣ ರಸ್ತೆ ಕಡಿತದ ಭೀತಿ ಎದುರಿಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಗುಡ್ಡ ಕುಸಿಯುತ್ತಿದ್ದ ಕಳಸ-ಕುದುರೆಮುಖ ರಸ್ತೆಯ ಬಿಳುಗೋಡು ಎಂಬಲ್ಲಿ ಈ ಬಾರಿಯು ಗುಡ್ಡ ಕುಸಿತದಂತಹ ಘಟನೆಗಳು ಮುಂದುವರಿದಿದೆ.
ಕಳಸ-ಕುದುರೆಮುಖ ರಸ್ತೆಯುದ್ದಕ್ಕೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ರಸ್ತೆ ಪೂರ್ತಿ ನದಿಯ ರೂಪವನ್ನು ಪಡೆದಿದ್ದು, ರಸ್ತೆ ಸಂಪೂರ್ಣ ಶಿಥಿಲಗೊಂಡಿದೆ. ತಾಲೂಕಿನ ಭದ್ರಾ ನದಿ ಮತ್ತು ಸೋಮವತಿ ನದಿಗಳು ತುಂಬಿ ಹರಿದು ನದಿ ಪಾತ್ರದಲ್ಲಿರುವ ಕೃಷಿ ಭೂಮಿಗಳು ಜಲಾವೃತವಾಗಿವೆ.