ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಸಚಿವ ಕೆ.ಗೋಪಾಲಯ್ಯ
ಬೆಂಗಳೂರು, ಜು. 22: `ನಾಯಕತ್ವ ಬದಲಾವಣೆ ಕುರಿತಾಗಿ ಪಕ್ಷದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ' ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಇವತ್ತು ಸಚಿವ ಸಂಪುಟ ಸಭೆ ಇದೆ. ನಾವೆಲ್ಲರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇವೆ. ನಾವೆಲ್ಲರೂ ಅವರ ಜೊತೆಗಿದ್ದೇವೆ. ಹೈಕಮಾಂಡ್ ಭೇಟಿ ಮಾಡಲು ನಾವೆಲ್ಲ ಒಟ್ಟಿಗೆ ಕೂತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ' ಎಂದು ವಿವರಣೆ ನೀಡಿದರು.
`ಯಡಿಯೂರಪ್ಪ ನಮ್ಮ ಧ್ವನಿಯಾಗಿದ್ದಾರೆ. ನಾವೆಲ್ಲ ವಲಸಿಗರಲ್ಲ ಬದಲಾಗಿ ಬಿಜೆಪಿಯವರು. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾವು ಬದ್ಧರಾಗಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಮಾತನಾಡಿ ಅವರಿಗೆ ಧೈರ್ಯ ತುಂಬುತ್ತೇವೆ' ಎಂದು ಗೋಪಾಲಯ್ಯ ಹೇಳಿದರು.
`ನಾಯಕತ್ವ ಬದಲಾವಣೆ ವಿಚಾರವಾಗಿ ಜು.26ರಂದು ಮಹತ್ವದ ಬೆಳವಣಿಗೆಗಳು ನಡೆಯಲಿದೆ. ಜು.25ರಂದು ಈ ಕುರಿತಾಗಿ ಹೈಕಮಾಂಡ್ ಸೂಚನೆ ನೀಡಲಿದೆ. ಈ ಸೂಚನೆಯನ್ನು ಪಾಲನೆ ಮಾಡಲು ಸಿದ್ಧ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಹೈಕಮಾಂಡ್‍ನಿಂದ ಏನು ಸೂಚನೆ ಬರಲಿದೆ ಎಂಬುವುದು ಮಾತ್ರ ಇನ್ನೂ ಸ್ಪಷ್ಟಗೊಂಡಿಲ್ಲ. ಆದರೂ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ವಲಸಿಗರಲ್ಲಿ ಆತಂಕ ಸೃಷ್ಟಿಸಿದೆ ಎಂಬುವುದಂತೂ ಸ್ಪಷ್ಟ. ಹೀಗಾಗಿ ಎಲ್ಲರ ಚಿತ್ತ ಹೈಕಮಾಂಡ್‍ನತ್ತ ನೆಟ್ಟಿದೆ.