×
Ad

ಶಾಲೆ ಪುನರಾರಂಭಿಸುವ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?

Update: 2021-07-22 20:13 IST

ಬೆಂಗಳೂರು, ಜು.22: ರಾಜ್ಯ ವ್ಯಾಪಿ ಶಾಲೆಗಳು ಪುನರಾರಂಭಿಸುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಗುರುವಾರ ಎಸೆಸೆಲ್ಸಿ ಪರೀಕ್ಷೆ ಹಿನ್ನೆಲೆ ನಗರ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಶಾಲೆ ಆರಂಭ ಸಂಬಂಧ ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಇನ್ನು, ಸೋಮವಾರ ಆಯುಕ್ತರು ವರದಿ ನೀಡಲಿದ್ದಾರೆ ಎಂದರು.

ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಅಧ್ಯಯನ ಮಾಡಿ ನಮಗೆ ವರದಿ ಕೊಡಲಿದ್ದಾರೆ. ಐಸಿಎಂಆರ್ ನಿಂದಲೂ ಶಾಲೆಗಳನ್ನು ಪ್ರಾರಂಭಿಸಬಹುದು ಎಂಬ ವರದಿ ಬಂದಿದೆ. ಆರೋಗ್ಯ ತಜ್ಞ ಡಾ.ದೇವಿ ಶೆಟ್ಟಿ ಅವರು ಕೊಟ್ಟಿರುವ ವರದಿಯನ್ನು ಅಧ್ಯಯನ ಮಾಡಿ ನಂತರ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಇಂದು ಎಸೆಸೆಲ್ಸಿ ಎರಡನೆ ಮತ್ತು ಕೊನೆಯ ದಿನದ ಪರೀಕ್ಷೆ ನಡೆಯುತ್ತಿದೆ. ಮೊದಲ ದಿನ ಗಣಿತ, ವಿಜ್ಞಾನ ಹಾಗು ಸಮಾಜ ವಿಷಯಗಳಿಗೆ ಪರೀಕ್ಷೆ ನಡೆದಿದೆ. ಇಂದು ಕನ್ನಡ, ಇಂಗ್ಲಿಷ್, ಹಿಂದಿ ವಿಷಯಗಳಿಗೆ ಪರೀಕ್ಷೆ ನಡೆಯುತ್ತಿದೆ ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಶೇ.99.6 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಧಿಕಾರಿ ಮತ್ತು ಬಿಎಒಗಳ ಜೊತೆಗೆ ಇಂದಿನ ಪರೀಕ್ಷೆ ನಡೆಸುವ ಬಗ್ಗೆ ಚರ್ಚಿಸಿದ್ದೇನೆ. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಎಲ್ಲ ಮಕ್ಕಳು ಲವಲವಿಕೆಯಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News