ಮುಂದಿನ ಎರಡು ವರ್ಷಗಳಲ್ಲಿ 5ಲಕ್ಷ ಮನೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ: ಸಚಿವ ಬಸವರಾಜ ಬೊಮ್ಮಾಯಿ

Update: 2021-07-22 15:02 GMT

ಬೆಂಗಳೂರು, ಜು. 22: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ನಡುವೆಯೇ `ನಾಯಕತ್ವ ಬದಲಾವಣೆಯ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ `ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 5ಲಕ್ಷ ಮನೆ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ' ನೀಡಲಾಗಿದೆ.

ಗುರುವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಬಸವರಾಜ ಬೊಮ್ಮಾಯಿ, `ಬಸವ, ಅಂಬೇಡ್ಕರ್, ದೇವರಾಜ ಅರಸು ವಸತಿ ಯೋಜನೆಯಲ್ಲಿ ರಾಜ್ಯದ ಗ್ರಾಮೀಣ ಭಾಗದಲ್ಲಿ 4 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ಅಂಬೇಡ್ಕರ್ ಮತ್ತು ವಾಜಪೇಯಿ ಆಶ್ರಯ ಯೋಜನೆಯಡಿ 1ಲಕ್ಷ ಸೇರಿದಂತೆ ಮುಂದಿನ ಎರಡು ವರ್ಷಗಳಲ್ಲಿ ಒಟ್ಟು 800 ಕೋಟಿ ರೂ.ವೆಚ್ಚದಲ್ಲಿ 5ಲಕ್ಷ ಮನೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ' ಎಂದು ತಿಳಿಸಿದರು.

`ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಮತ್ತು ಆಶ್ರಯ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡಲಿದೆ' ಎಂದ ಅವರು, `ಬೆಂಗಳೂರು ನಗರದಲ್ಲಿ 1ಲಕ್ಷ ಬಹುಮಹಡಿ ವಸತಿ ಯೋಜನೆಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಸಹಿತ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು 500 ಕೋಟಿ ರೂಪಾಯಿಗಳನ್ನು ಒದಗಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ' ಎಂದು ವಿವರಿಸಿದರು.

ಆವಿಷ್ಕಾರ ಕೇಂದ್ರಗಳ ಸ್ಥಾಪನೆ: `ರಾಜ್ಯದ ಏಳು ಪ್ರಮುಖ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ `ಹೆಕ್ಸಾಗನ್ ಮ್ಯಾನುಫ್ಯಾಕ್ಚರಿಂಗ್ ಇಂಟೆಲಿಜನ್ಸ್ ಇಂಡಿಯಾ ಕಂಪೆನಿ' ಹಾಗೂ ರಾಜ್ಯ ಸರಕಾರದ ಆಶ್ರಯದಲ್ಲಿ ಬೆಳೆ ಸರ್ವೆ, ಬೆಳೆ ವಿಧಾನ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೊಸ ಆವಿಷ್ಕಾರ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು ಒಟ್ಟು 110ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಆ ಪೈಕಿ 85 ಕೋಟಿ ರೂ.ಗಳನ್ನು ಕಂಪೆನಿ ಹೂಡಿಕೆ ಮಾಡಲಿದ್ದು, ಉಳಿದ ಮೊತ್ತವನ್ನು ಸರಕಾರ ಭರಿಸಲಿದೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

`ಕೃಷಿ ಇಲಾಖೆಯಿಂದ ಕೃಷಿ ವಿಜ್ಞಾನಿಗಳ ಸಲಹೆಯನ್ನು ಆಧರಿಸಿ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ-ನೂತನ ಯೋಜನೆ 75 ಕೋಟಿ ರೂ.ಅಂದಾಜಿನಲ್ಲಿ ಮುಂದಿನ 5 ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಉದ್ದೇಶಿತ ಯೋಜನೆಗೆ ಆರಂಭಿಕವಾಗಿ 10 ಕೋಟಿ ರೂಪಾಯಿಗಳನ್ನು ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ' ಎಂದು ಅವರು ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದಿರುವವರಿಗೆ ಮೀಸಲಾತಿ: `ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು ಸೇರಿ ಮೀಸಲಾತಿ ಪಟ್ಟಿಯಲ್ಲಿರುವವರನ್ನು ಹೊರತುಪಡಿಸಿ ವಾರ್ಷಿಕ 8ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಇರುವ ಕುಟುಂಬಗಳ ಸದಸ್ಯರಿಗೆ ನೇಮಕಾತಿ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಕೇಂದ್ರದ ನಿಯಮಗಳ ಅನುಸಾರ ಸಂಪುಟ ಅನುಮೋದನೆ ನೀಡಿದೆ' ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.

ನಿಯೋಜನೆ ರದ್ದು: `ಕಂದಾಯ ಇಲಾಖೆಯಲ್ಲಿ ತಹಸೀಲ್ದಾರರ ನೇಮಕಕ್ಕೆ ತಿದ್ದುಪಡಿ ತರಲಾಗಿದೆ. ಬೇರೆ ಇಲಾಖೆಯಿಂದ ತಹಸೀಲ್ದಾರ್ ಹುದ್ದೆಗೆ ನಿಯೋಜನೆ ಅಥವಾ ಭಡ್ತಿ ಆಧಾರದ ಮೇಲೆ ನೇಮಕಕ್ಕೆ ತಡೆ ನೀಡಲಾಗಿದೆ. ಭೂ ದಾಖಲೆ ಪರಿಶೀಲನೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ನಿಯೋಜನೆ ಮೇಲೆ ಬಂದವರಿಗೆ ಸೂಕ್ತ ಮಾಹಿತಿ ಇರುವುದಿಲ್ಲ. ಆದುದರಿಂದ ತಹಶಿಲ್ದಾರರ ಹುದ್ದೆಗೆ ಅನ್ಯ ಇಲಾಖೆ ಅಧಿಕಾರಿಗಳನ್ನು ನಿಯೋಜನೆ ಮಾಡಬಾರದು ಎಂಬ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಹೇಳಿದರು.

`ರಾಜ್ಯ ಸರಕಾರ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆಗೆ ಮಂಜೂರಾತಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಖರ್ಚು, ವೆಚ್ಚಗಳ ಮೇಲ್ತುವಾರಿ ಹಣಕಾಸು ಇಲಾಖೆ ಬದಲಿಗೆ ಪ್ರಾಧಿಕಾರ ರಚನೆಗೆ ತೀರ್ಮಾನಿಸಿದ್ದು, ಲೆಕ್ಕ ಪರಿಶೋಧನೆಯನ್ನು ಮಾತ್ರ ಹಣಕಾಸು ಇಲಾಖೆ ಮೂಲಕವೇ ನಿರ್ವಹಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ' ಎಂದರು.
ಕೆರೆ ತುಂಬಿಸುವ ಯೋಜನೆಗೆ ಸಮ್ಮತಿ: `ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಕೆರೆ ಸೇರಿದಂತೆ ಸುತ್ತಮುತ್ತಲಿನ ಏಳು ಕೆರೆಗಳಿಗೆ ವಾಣಿವಿಲಾಸ ಸಾಗರ(ವೇದಾವತಿ)ದಿಂದ ಕೆರೆಗಳನ್ನು ತುಂಬಿಸುವ ಯೋಜನೆಗೆ 90 ಕೋಟಿ ರೂ.ಒದಗಿಸಲಾಗಿದ್ದು, 40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ' ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

`35 ಲಕ್ಷ ರೂ.ಗಳಿಂದ 45 ಲಕ್ಷ ರೂ.ಗಳ ಒಳಗಿನ ಅಪಾರ್ಟ್‍ಮೆಂಟ್‍ಗಳಲ್ಲಿನ ಫ್ಲಾಟ್‍ಗಳ ಖರೀದಿಗೆ ವಿಧಿಸುವ ಸ್ಟಾಂಪ್ ಡ್ಯೂಟಿ ಶೇ.5ರಿಂದ ಶೇ.3ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಗೈಡೆನ್ಸ್ ವ್ಯಾಲ್ಯೂ ಕಡಿಮೆ ಮಾಡಲು ಸಮಿತಿ ರಚನೆ ಮಾಡಲಿದ್ದು, ಈ ಸಂಬಂಧ ಸಮಿತಿ ಪರಿಶೀಲನೆ ನಡೆಸಲಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಬ್ಯಾಡರಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ 10.50 ಕೋಟಿ ರೂ.ಗಳನ್ನು ಒದಗಿಸಲು ಸಂಪುಟ ಅನುಮೋದನೆ ನೀಡಿದೆ' ಎಂದು ಅವರು ತಿಳಿಸಿದರು.

`ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬರಪೀಡಿತ ಜಿಲ್ಲೆಗಳಿಗೆ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ನೀಡುವ ಕೆ.ಸಿ.ವ್ಯಾಲಿ ಯೋಜನೆಯ 718 ಕೋಟಿ ರೂ.ಗಳ 248 ಎಂಎಲ್‍ಡಿ ತ್ಯಾಜ್ಯ ನೀರು ಸಂಸ್ಕರಣೆಯ ಡಿಎಪಿಆರ್‍ಗೆ ಒಪ್ಪಿಗೆ ನೀಡಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಗೋರಕ್ಷಣೆ ಸಂಘಕ್ಕೆ 9 ಎಕರೆ ಭೂಮಿ ಮಂಜೂರಿಗೆ ಒಪ್ಪಿಗೆ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಗೆ ಎನ್‍ಟಿಪಿಎಸ್‍ಗೆ 2 ಎಕರೆ ಭೂಮಿ ನೀಡಲು ಸಮ್ಮತಿಸಲಾಗಿದೆ' ಎಂದು ಅವರು ತಿಳಿಸಿದರು.

`ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೋಳಿ ಗ್ರಾಮದಲ್ಲಿ ಪ್ರವಾಹ ತಡೆಗಟ್ಟಲು ಮಲಪ್ರಭಾ ನದಿಗೆ 126 ಕೋಟಿ ರೂ.ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ತಿಂಗಳು ನೀಡಿದ ಆಡಳಿತಾತ್ಮಕ ಅನುಮೋದನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ' ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಮಾಹಿತಿ ನೀಡಿದರು.

ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆ ವಿಧೇಯಕಕ್ಕೆ ಸಂಪುಟ ಸಮ್ಮತಿಸಿದೆ. ಅಲ್ಲದೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದಲ್ಲಿ ರಸ್ತೆ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗೆ 25 ಕೋಡಿ ರೂ.ಗಳನ್ನು ಒದಗಿಸಲು ಸಂಪುಟ ಅನುಮೋದನೆ ನೀಡಿದೆ.

-ಬಸವರಾಜ ಬೊಮ್ಮಾಯಿ, ಗೃಹ, ಕಾನೂನು ಸಚಿವ

`ಮುಖ್ಯಮಂತ್ರಿ ರಾಜೀನಾಮೆ ಬಗ್ಗೆ ಸಚಿವ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ಸಚಿವ ಸಂಪುಟ ಅಜೆಂಡಾ ಹೊರತುಪಡಿಸಿ ಬೇರೇನೂ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಏಕೆ ಆ ರೀತಿ ಹೇಳಿಕೆ ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳುವುದು ಉತ್ತಮ'

-ಡಾ.ಅಶ್ವತ್ಥ ನಾರಾಯಣ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News