×
Ad

ಕೊಡಗಿನಲ್ಲಿ ಗಾಳಿ ಸಹಿತ ಧಾರಾಕಾರ ಮಳೆ : ಹಾನಿ ಪ್ರದೇಶಗಳಿಗೆ ಡಿಸಿ, ಎಸ್‍ಪಿ ಭೇಟಿ

Update: 2021-07-22 21:18 IST

ಮಡಿಕೇರಿ ಜು.22 : ಕೊಡಗು ಜಿಲ್ಲೆಯಾದ್ಯಂತ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ. ಕುಶಾಲನಗರ ಹಾಗೂ ಸಂಪಾಜೆ ಹೆದ್ದಾರಿಯಲ್ಲಿ ಅಲ್ಲಲ್ಲಿ ಬರೆ ಮತ್ತು ರಸ್ತೆ ಕುಸಿದ್ದಿದ್ದು, ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಭೇಟಿ ನೀಡಿ ಪರಿಶೀಲಿಸಿದರು.

ಮಡಿಕೇರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ತಲಕಾವೇರಿ, ಭಾಗಮಂಡಲ, ನಾಪೋಕ್ಲು ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಕ್ಕಂದೂರು ಭಾಗದಲ್ಲಿ ಆತಂಕವಿರುವುದರಿಂದ ಎತ್ತರದ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳÀಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ವಿರಾಜಪೇಟೆ ತಾಲೂಕಿನಲ್ಲೂ ಗಾಳಿ ಸಹಿತ ಮಳೆಯಾಗುತ್ತಿದ್ದು, ಹಲವು ರಸ್ತೆಗಳು ಹದಗೆಟ್ಟು ವಾಹನ ಸಂಚಾರ ಕಷ್ಟವಾಗಿದೆ. ಮಳೆ ಮುಂದುವರೆದಿದ್ದು, ನದಿತೀರದ ಜನರಲ್ಲಿ ಆತಂಕ ಮೂಡಿದೆ. ಗಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು, ಗ್ರಾಮಸ್ಥರು ಬೆಳಕಿಲ್ಲದೆ ದಿನ ದೂಡಬೇಕಾಗಿದೆ.

ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ತಾಲ್ಲೂಕಿನ ಶಾಂತಳ್ಳಿಯಲ್ಲಿ ದಾಖಲೆಯ 175.8 ಮಿಲೀ ಮೀಟರ್ ಮಳೆಯಾಗಿದೆ.

ಚೋರನ ಹೊಳೆ ಭೋರ್ಗರೆಯುತ್ತಿದ್ದು, ಕಿರಗಂದೂರು ಹಾಗು ಐಗೂರಿನ ಹೊಳೆದಂಟಯಲ್ಲಿರುವ 20 ಮನೆಗಳು ಅಪಾಯದಲ್ಲಿವೆ. ಕೆಲ ಮನೆಯ ಸುತ್ತ ನೀರು ಆವರಿಸಿದೆ. ಹೊಳೆಯಲ್ಲಿ ಪ್ರವಾಹ ಹೆಚ್ಚಾದರೆ, ಅಲ್ಲಿನ ನಿವಾಸಿಗಳಿಗೆ ಸಂಕಷ್ಟ ಎದುರಾಗಲಿದೆ.

2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಕಿರಗಂದೂರು ಮಕ್ಕಳಗುಡಿ ಬೆಟ್ಟದ ಕೆಳಭಾಗದಲ್ಲಿ ಭೂಕುಸಿತವಾಗಿದ್ದು, ಆ ಜಾಗದಲ್ಲಿ ನೀರು ಬರುತ್ತಿದ್ದು, ನೀರಿನ ಹರಿವು ಹೆಚ್ಚಾಗಿ ಮೋರಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಸ್ಥಳಕ್ಕೆ ಕಿರಗಂದೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗು ಸದಸ್ಯರು ಭೇಟಿ ನೀಡಿದ್ದರು, ಸಮಸ್ಯೆ ಪರಿಹಾರ ಭರವಸೆ ನೀಡಿದರು.

ಕಿರಗಂದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಗಣೇಶ್, ಮುರುಘ, ರಾಮಕೃಷ್ಣ, ಚಂದ್ರ, ಆರ್.ಸುಬ್ರಮಣಿ ಮತ್ತಿತರರ ಮನೆಗಳು ಅಪಾಯ ಸ್ಥಿತಿಯಲ್ಲಿವೆ. ಸಂತ್ರಸ್ಥರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮದ ಪ್ರಮುಖರಾದ ಗೌತಮ್ ಕಿರಗಂದೂರು, ಟಿ.ಜೆ.ಗಣೇಶ್ ಒತ್ತಾಯಿಸಿದ್ದಾರೆ.

ಕುಶಾಲನಗರ, ಸೋಮವಾರಪೇಟೆ ಸಂಪರ್ಕದ 33ಕೆ.ವಿ. ವಿದ್ಯುತ್ ಮಾರ್ಗದ ಮೇಲೆ ಬುಧವಾರ ರಾತ್ರಿ ಮರಬಿದ್ದ ಪರಿಣಾಮ, ರಾತ್ರಿಯಿಂದ ವಿದ್ಯುತ್ ವ್ಯತ್ಯಯವಾಗಿತ್ತು. ಗುರುವಾರ ಸೆಸ್ಕ್ ಸಿಬ್ಬಂದಿಗಳು ಸರಿಪಡಿಸಿದರು. ಗುರವಾರ ಹತ್ತನೆ ತರಗತಿ ಪರೀಕ್ಷೆಯಿದ್ದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ಸಮಸ್ಯೆಯಾಗಿತ್ತು. ಗುರುವಾರ ಬೆಳಿಗ್ಗೆಯಿಂದಲೆ ಗಾಳಿ ಸಹಿತ ಮಳೆ ಸುರಿಯುತ್ತಿದ್ದ ಪರಿಣಾಮ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರದಾಡಿದರು. ಛತ್ರಿ ಹಿಡಿದು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಒದ್ದೆಯಾದ ಬಟ್ಟೆಯಲ್ಲಿ ಚಳಿಯಲ್ಲೇ ಪರೀಕ್ಷೆ ಬರೆದರು.

ಸೋಮವಾರಪೇಟೆ, ಶನಿವಾರಸಂತೆ, ರಾಜ್ಯ ಹೆದ್ದಾರಿಯ ಹೊನವಳ್ಳಿ ಬಳಿ ಬುಧವಾರ ಸಂಜೆ ರಸ್ತೆಗಡ್ಡಲಾಗಿ ಮರಬಿದ್ದ ಪರಿಣಾಮ, ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.

ಕಳೆದ 24 ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ 175.8 ಮಿಲೀ ಮೀಟರ್ ಮಳೆಯಾಗಿದೆ. ಸೋಮವಾರಪೇಟೆ 110, ಸುಂಟಿಕೊಪ್ಪ 77, ಶನಿವಾರಸಂತೆ 96.6, ಕುಶಾಲನಗರ 22.2 ಹಾಗೂ ಕೊಡ್ಲಿಪೇಟೆಗೆ 55.2 ಮಿಲೀ ಮೀಟರ್ ಮಳೆಯಾಗಿದೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News