×
Ad

ಕನ್ಸೈರ್ಜ್ ಟ್ರೇಡ್ ಮಾರ್ಕ್ ಬಳಸದಂತೆ ಸ್ಯಾಮ್‍ಸಂಗ್ ಕಂಪೆನಿಗೆ ಕೋರ್ಟ್ ಆದೇಶ

Update: 2021-07-22 21:38 IST

ಬೆಂಗಳೂರು, ಜು.22: ನೋಂದಾಯಿತ ಟ್ರೇಡ್ ಮಾರ್ಕ್ ಕನ್ಸೈರ್ಜ್ ಯಾವುದೇ ರೀತಿಯಲ್ಲೂ ಬಳಸದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸ್ಯಾಮ್ ಸಂಗ್ ಇಂಡಿಯಾ ಸಂಸ್ಥೆಗೆ ಮಧ್ಯಂತರ ಆದೇಶ ನೀಡಿದೆ.

ಮುಂದಿನ ಆದೇಶದವರೆಗೆ ಸ್ಯಾಮ್ ಸಂಗ್ ಇಂಡಿಯಾ ಸಂಸ್ಥೆ ಸೇರಿದಂತೆ ಅದರ ಯಾವುದೇ ಏಜೆಂಟ್ ಅಥವಾ ಇತರೆ ಸೇವಾದಾರರು ಕನ್ಸೈರ್ಜ್ ಟ್ರೇಡ್ ಮಾರ್ಕ್ ನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಳಸದಂತೆ ಕೋರ್ಟ್ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಅರ್ಜಿದಾರರು ತಾವು ಟ್ರೇಡ್ ಮಾರ್ಕ್ ಹೊಂದಿರುವ ಕುರಿತು ತಿಳಿಸಿರುವುದರಿಂದ ಅದರ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದಾಗಿ ತಿಳಿಸಿರುವ ನ್ಯಾಯಾಲಯ ಪ್ರತಿವಾದಿಗಳ ವಿವರಣೆ ಆಲಿಸಲು ವಿಚಾರಣೆಯನ್ನು ಆ.5ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ: ಭಾರತದಲ್ಲಿ ಮೊದಲಿಗೆ ಕನ್ಸೈರ್ಜ್ ಸೇವೆಗಳನ್ನು ಆರಂಭಿಸದವರು ನಾವು. ಆದರೆ ನಮ್ಮ ಟ್ರೇಡ್ ಮಾರ್ಕ್‍ನ್ನು ಸ್ಯಾಮ್ ಸಂಗ್ ಇಂಡಿಯಾ ಸಂಸ್ಥೆಯು ಸ್ಟೋರಿ ಎಕ್ಸ್‍ಪೀರಿಯನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಮೂಲಕ ನಮ್ಮ ಸೇವೆ ಮತ್ತು ಖ್ಯಾತಿಗೆ ಕಳಂಕ ತಂದಿದೆ. ಕಿರು ಹೊತ್ತಿಗೆ, ಪ್ರಚಾರ ಸಾಮಗ್ರಿ ಹಾಗೂ ಜಾಹೀರಾತುಗಳಲ್ಲಿ ಕನ್ಸೈರ್ಜ್ ಟ್ರೇಡ್ ಮಾರ್ಕ್ ಬಳಸಿಕೊಂಡಿದೆ ಎಂದು ಲೆಸ್ ಕನ್ಸೈರ್ಜ್ ಸರ್ವೀಸಸ್ ಪ್ರೈ. ಲಿ. ಮತ್ತು ಕ್ಲಬ್ ಕನ್ಸೈರ್ಜ್ ಸರ್ವೀಸಸ್ ಇಂಡಿಯಾ ಪ್ರೈ.ಲಿ ಮುಖ್ಯಸ್ಥ ದೀಪಾಲಿ ಸಿಕಂದ್ ಆರೋಪಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಸ್ಯಾಮ್ ಸಂಗ್ ಇಂಡಿಯಾ ಹಾಗೂ ಸ್ಟೋರಿ ಎಕ್ಸ್ ಪೀರಿಯನ್ಸ್ ಪ್ರೈ.ಲಿ. ವಿರುದ್ಧ ಕನ್ಸೈರ್ಜ್ ಟ್ರೇಡ್ ಮಾರ್ಕ್ ಉಲ್ಲಂಘಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಹೊಟೇಲ್, ಪ್ರವಾಸ, ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ಗ್ರಾಹಕರ ಅವಶ್ಯಾನುಸಾರ ಸೇವೆ ನೀಡುವ ವ್ಯವಸ್ಥೆಗೆ ಕನ್ಸೈರ್ಜ್ ಎನ್ನಲಾಗುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News