×
Ad

ಎಲ್ಲ ಅಭ್ಯರ್ಥಿಗಳಿಗೂ ಪಿಯುಸಿ ಪ್ರವೇಶಾವಕಾಶ: ಸಚಿವ ಸುರೇಶ್ ಕುಮಾರ್

Update: 2021-07-22 22:12 IST

ಬೆಂಗಳೂರು, ಜು.22: ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 10ನೆ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುತ್ತಿರುವುದರಿಂದ ಪಿಯುಸಿ ಸೇರಬಯಸುವ ಎಲ್ಲರಿಗೂ ಪ್ರವೇಶಾವಕಾಶ ದೊರೆಯಲಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪಿಯುಸಿ ಕಾಲೇಜುಗಳಲ್ಲಿ ಒಟ್ಟಾರೆ 12 ಲಕ್ಷ ಸೀಟುಗಳು ಲಭ್ಯವಿವೆ. ಜಿಲ್ಲಾವಾರು ಅಂಕಿಅಂಶಗಳನ್ನು ಸಂಗ್ರಹಿಸಿದ್ದು, ಅದಕ್ಕಾಗಿ ಅಧಿಕಾರಿಗಳ ಸಮನ್ವಯ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು.

ಓರ್ವ ವಿದ್ಯಾರ್ಥಿಗೂ ಪಿಯುಸಿ ಪ್ರವೇಶಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಯಾವುದೇ ಸಂಸ್ಥೆಗಳು ಸೀಟು ಹೆಚ್ಚಳದ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಅವರ ಬೇಡಿಕೆಯನ್ನು ಪುರಸ್ಕರಿಸಲಾಗುವುದು ಎಂದ ಅವರು, ಆ.10ರೊಳಗೆ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳ ಶೇಕಡ ಹಾಜರಾತಿಯೂ ಸಹ ಈ ಬಾರಿ ಹೆಚ್ಚಾಗಿದೆ ಎಂದು ಅವರು ಹೇಳಿದರು. 

ಇನ್ನು, ಭಾಷಾ-1 ವಿಷಯಕ್ಕೆ 8,19,694 ಅಭ್ಯರ್ಥಿಗಳು ನೋಂದಾಯಿಸಿದ್ದರೆ, 8,16,544 ಅಭ್ಯರ್ಥಿಗಳು ಹಾಜರಾಗಿ 3150 ಮಕ್ಕಳು ಗೈರು ಹಾಜರಾಗಿದ್ದಾರೆ. ಶೇ.99.62 ಹಾಜರಾತಿ ಇದೆ. ಅಲ್ಲದೆ, ಕಳೆದ ವರ್ಷ ಇದು 98.41 ಇತ್ತು.

ಅದೇ ರೀತಿ, ಭಾಷಾ-2 ವಿಷಯಕ್ಕೆ 8,27,988 ಅಭ್ಯರ್ಥಿಗಳು ನೋಂದಾಯಿಸಿದ್ದರೆ, 8,24,686 ಅಭ್ಯರ್ಥಿಗಳು ಹಾಜರಾಗಿ 3302 ಮಕ್ಕಳು ಗೈರು ಹಾಜರಾಗಿದ್ದಾರೆ. ಶೇ.99.60 ಹಾಜರಾತಿ ಇದೆ. ಕಳೆದ ವರ್ಷ ಇದು 98.47 ಇತ್ತು. ಭಾಷಾ-3 ವಿಷಯಕ್ಕೆ 8,17,640 ಅಭ್ಯರ್ಥಿಗಳು ನೋಂದಾಯಿಸಿದ್ದರೆ, 8,14,538 ಅಭ್ಯರ್ಥಿಗಳು ಹಾಜರಾಗಿ 3102 ಮಕ್ಕಳು ಗೈರು ಹಾಜರಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.47 ಇತ್ತು ಎಂದು ಸುರೇಶ್ ಕುಮಾರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News