ಅಮೆರಿಕ ಕಾಂಗ್ರೆಸ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತೀಯ ಮೂಲದ ಶ್ರೀನಾ ಕುರಾನಿ

Update: 2021-07-23 03:48 GMT
Photo credit: Twitter@shrinakurani

ಕ್ಯಾಲಿಫೋರ್ನಿಯಾ, ಜು.23: ಮುಂದಿನ ನವೆಂಬರ್‌ನಲ್ಲಿ ಅಮೆರಿಕದ ಕಾಂಗ್ರೆಸ್‌ಗೆ ನಡೆಯುವ ಚುನಾವಣೆಯಲ್ಲಿ ಕ್ಯಾಲಿಫೋರ್ನಿಯಾದ 42ನೇ ಕಾಂಗ್ರೆಸ್ ಜಿಲ್ಲಾ ಸ್ಥಾನದಿಂದ 15 ಬಾರಿಯ ರಿಪಬ್ಲಿಕನ್ ಸದಸ್ಯ ಕೆನ್ ಕಲ್ವರ್ಟ್ ವಿರುದ್ಧ ಸ್ಪರ್ಧಿಸುವುದಾಗಿ ಭಾರತ ಮೂಲದ ಡೆಮಾಕ್ರಟಿಕ್ ನಾಯಕಿ ಶ್ರೀನಾ ಕುರಾನಿ ಪ್ರಕಟಿಸಿದ್ದಾರೆ.

"ವಾಷಿಂಗ್ಟನ್‌ನಲ್ಲಿ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ. ಈ ಮೂಲಕ ಸುಸ್ಥಿರ ಭವಿಷ್ಯ ಅಭಿವೃದ್ಧಿಪಡಿಸುವುದು ಮತ್ತು ಜನರಿಗೆ ಹೆಚ್ಚು ಸುರಕ್ಷಿತ, ಆರೋಗ್ಯಕರ ಮತ್ತು ಉದ್ಯೋಗದ ಆಕಾಂಕ್ಷೆ ಈಡೇರಿಸಿಕೊಳ್ಳಲು ಯಶಸ್ವಿಯಾಗುವಂತೆ ಅವಕಾಶಗಳನ್ನು ಹೊಂದಿದ ಒಳನಾಡು ಸಾಮ್ರಾಜ್ಯವನ್ನು ಅಭಿವೃದ್ಧಿಪಡಿಸುವುದು ಉದ್ದೇಶ" ಎಂದು ಹೇಳಿದ್ದಾರೆ.

"ಎಂಜಿನಿಯರ್, ಉದ್ಯಮಶೀಲ ಮತ್ತು ವಾಸ್ತವ ಆಧರಿತ ಸಮಸ್ಯೆ ಬಗೆಹರಿಸುವ ಕೌಶಲ ಹೊಂದಿದ ವ್ಯಕ್ತಿತ್ವ" ಎಂದು ಬಣ್ಣಿಸಿಕೊಂಡಿರುವ ಅವರು, ತಾನು ರಾಜಕಾರಣಿ ಅಲ್ಲ ಎಂದು ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾರೆ. "ಕೆನ್ ಕಲ್ವಟ್ ಅವರಂಥ ವೃತ್ತಿಪರ ವಾಷಿಂಗ್ಟನ್ ರಾಜಕಾರಣಿಗಳು ಸ್ವಂತಕ್ಕೆ, ರಾಜಕೀಯ ಪಕ್ಷಗಳಿಗೆ ಮತ್ತು ಕಾರ್ಪೊರೇಟ್ ದಾನಿಗಳಿಗೆ ಮಾತ್ರ ನೆರವಾಗುತ್ತಿದ್ದು, ಹಲವು ಮಂದಿಗೆ ವೃತ್ತಿಪರ ಅವಕಾಶಗಳು ಕೈಗೆಟುಕದಾಗಿದೆ" ಎಂದು ಶ್ರೀನಾ ಹೇಳಿದ್ದಾರೆ.

"30 ವರ್ಷಗಳಿಂದ ವಾಷಿಂಗ್ಟನ್‌ನಲ್ಲಿರುವ ಕೆನ್ ಕಲ್ವೆರ್ಟ್ ಹಲವು ಬಾರಿ ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಮತ ಚಲಾಯಿಸುತ್ತಿದ್ದು, ಹೊಸ ದೃಷ್ಟಿಕೋನಕ್ಕೆ ಇದು ಸುಸಂದರ್ಭ" ಎಂದು ಬಣ್ಣಿಸಿದ್ದಾರೆ. ಕಲ್ವೆರ್ಟ್ 1992ರಿಂದ ನಿರಂತರವಾಗಿ ಕ್ಯಾಲಿಫೋರ್ನಿಯಾದಿಂದ ಆಯ್ಕೆಯಾಗುತ್ತಿದ್ದಾರೆ.

16ನೇ ವಯಸ್ಸಿನಲ್ಲೇ ಲಾ ಸೆರ್ರಾ ಹೈಸ್ಕೂಲ್‌ನಿಂದ ಪದವಿ ಪಡೆದ ಕುರಾನಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಕ್ಯಾಲಿಫೋರ್ನಿಯಾ ವಿವಿಯಿಂದ ಪದವಿ ಪಡೆದಿದ್ದಾರೆ. ಸುಸ್ಥಿರ ನೀರು ಮತ್ತು ಆಹಾರಕ್ಕಾಗಿ ತ್ಯಾಜ್ಯ ಕಡಿಮೆ ಮಾಡುವ ಕಂಪೆನಿಯನ್ನು ಆರಂಭಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.

ಅಮೆರಿಕ ಜನಪ್ರತಿನಿಧಿಸಭೆಯಲ್ಲಿ ಡಾ.ಅಮಿ ಬೇರಾ, ರೋ ಖನ್ನಾ, ರಾಜಾ ಕೃಷ್ಣಮೂರ್ತಿ ಮತ್ತು ಪ್ರಮಿಳಾ ಜಯಪಾಲ್ ಹೀಗೆ ನಾಲ್ವರು ಭಾರತೀಯ ಮೂಲದವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News