ಮಡಿಕೇರಿ- ಸಂಪಾಜೆ ರಸ್ತೆಯಲ್ಲಿ ಬಿರುಕು: ಭಾರೀ ವಾಹನಗಳ ಸಂಚಾರ ನಿರ್ಬಂಧಕ್ಕೆ ಶಾಸಕ ಕೆ.ಜಿ.ಬೋಪಯ್ಯ ಸಲಹೆ
ಮಡಿಕೇರಿ ಜು.23 : ಕೊಡಗು ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೈಸೂರು-ಬಂಟ್ವಾಳ ಹೆದ್ದಾರಿಯ ಮಡಿಕೇರಿ-ಸಂಪಾಜೆ ಮಾರ್ಗದ ಕಾಟಕೇರಿ ಬಳಿ, ಮದೆನಾಡು ಬಳಿಯ ಕರ್ತೋಜಿಯಲ್ಲಿ ರಸ್ತೆ ಬಿರುಕು ಹಾಗೂ ಎರಡನೇ ಮೊಣ್ಣಂಗೇರಿ ಬಳಿಯ ಹೆದ್ದಾರಿಯಲ್ಲಿ ಬರೆ ಕುಸಿತ ಉಂಟಾಗಿರುವುದರನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ಪರಿಶೀಲಿಸಿದರು.
ಮದೆನಾಡು ಬಳಿಯ ಕರ್ತೋಜಿಯಲ್ಲಿ ಹೆದ್ದಾರಿಗೆ ಮಣ್ಣು ಕುಸಿದಿದ್ದು, ಈಗಾಗಲೇ ಹೆದ್ದಾರಿಯಲ್ಲಿ ರಸ್ತೆ ಬಿರುಕು ಬಿಟ್ಟಿರುವುದನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ವೀಕ್ಷಿಸಿದರು.
ಬಳಿಕ ಮಾತನಾಡಿದ ಶಾಸಕರು ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆದ್ದಾರಿಯಲ್ಲಿ ಮಣ್ಣು ಕುಸಿಯುವುದರ ಜೊತೆಗೆ, ಹೆದ್ದಾರಿಯ ರಸ್ತೆ ಬಿರುಕು ಉಂಟಾಗಿದ್ದು, ಸ್ವಲ್ಪಮಟ್ಟಿಗೆ ಅಪಾಯದ ಮಟ್ಟ ತಲುಪುತ್ತಿದೆ ಎಂದರು.
ಇದೇ ರೀತಿ ಮಳೆ ಮುಂದುವರಿದಲ್ಲಿ ಮಡಿಕೇರಿ-ಮಂಗಳೂರು ಮಾರ್ಗದ ಹೆದ್ದಾರಿಯಲ್ಲಿ ಸಾರಿಗೆ ಸಂಪರ್ಕ ವ್ಯತ್ಯಯವಾಗಲಿದೆ. ಆದ್ದರಿಂದ 16 ಟನ್ ಅಧಿಕ ಭಾರದ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸುವುದು ಅಗತ್ಯ ಎಂದು ಸಲಹೆ ಮಾಡಿದರು.
ಭಾರಿ ವಾಹನಗಳ ಸಂಚಾರವನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ರಸ್ತೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ. ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿದರೂ ಸಹ, ಭಾರಿ ಮಳೆಗೆ ರಸ್ತೆ ಬದಿ ಮಣ್ಣು ಕುಸಿಯುತ್ತಿದೆ, ಆದ್ದರಿಂದ ಮುನ್ನೆಚ್ಚರ ವಹಿಸುವುದು ಅಗತ್ಯವಾಗಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಹೇಳಿದರು.
ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಚಾರ್ಮಾಡಿ ಘಾಟ್ ರಸ್ತೆ ವಾಹನ ಸಂಚಾರ ನಿಷೇಧಿಸಿಲಾಗಿದೆ. ಇದರಿಂದ ಮೈಸೂರು -ಬಂಟ್ವಾಳ ಮಾರ್ಗದ ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಆದ್ದರಿಂದ ಭಾರಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಕೆ,ಜಿ.ಬೋಪಯ್ಯ ಅವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಪ್ಪ ಅವರು ಮದೆನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ತೋಜಿಯಲ್ಲಿ ಭಾರಿ ಮಳೆಯಿಂದಾಗಿ ಮಣ್ಣು ಕುಸಿಯುತ್ತಿದೆ. ಭೂಮಿಯ ಕೆಳಭಾಗದಲ್ಲಿ ನೀರು ಉಕ್ಕುತ್ತಿರುವುದರಿಂದ ಮಣ್ಣು ಉಬ್ಬುತ್ತಿದೆ. ಆದ್ದರಿಂದ ಮಳೆಯ ನೀರು ಸಾರಾಗವಾಗಿ ಹರಿಯುವಂತೆ ಮಾಡಲಾಗುವುದು, ಎರಡು ದಿನದಲ್ಲಿ ಹೆದ್ದಾರಿಯನ್ನು ಸರಿಪಡಿಸಲಾಗುವುದು ಎಂದು ಅವರು ಹೇಳಿದರು.
ಭಾರಿ ವಾಹನಗಳು ಸಂಚರಿಸಿದರೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಬಹುದು, ಆದರಿಂದ ಈ ಸಂಬಂಧ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ ಎಂದು ಚಂದ್ರಪ್ಪ ಅವರು ತಿಳಿಸಿದರು. ಗುತ್ತಿಗೆದಾರರಾದ ಜಗದೀಶ ರೈ ಇತರರು ಇದ್ದರು.