ಬಿಜೆಪಿಯಲ್ಲಿ ನಾಯಕತ್ವಕ್ಕಾಗಿ ಕಚ್ಚಾಟ: ಕುಮಾರಸ್ವಾಮಿ ಟೀಕೆ
ಬೆಂಗಳೂರು, ಜು. 23: `ರಾಜ್ಯ ಬಿಜೆಪಿ ಸರಕಾರ ಎರಡು ವರ್ಷ ಪೂರೈಸಿದ್ದು, ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಆದರೆ, ಇದೀಗ ನಾಯಕತ್ವದ ಕಚ್ಚಾಟದಲ್ಲಿ ತೊಡಗಿದೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಬೀಳಿಸಿದ ಬಿಜೆಪಿಯವರು ಇದೀಗ ಜನರ ತೆರಿಗೆ ಹಣವನ್ನು ಯಾವ ರೀತಿ ಸದ್ಬಳಕೆ ಮಾಡಿದ್ದಾರೆ ಎಂಬುದನ್ನು ಅಂಕಿ-ಅಂಶ ಮೂಲಕ ರಾಜ್ಯದ ಜನತೆ ಮುಂದೆ ಹೋಗುವ ಕಾಲ ದೂರವಿಲ್ಲ' ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
`ಬಿಜೆಪಿ ಸರಕಾರ ತನ್ನ ಎರಡು ವರ್ಷಗಳ ಅವಧಿಯಲ್ಲಿ ಯೋಜನೆಗಳ ಹೆಸರಲ್ಲಿ ಲೂಟಿ ಮಾಡಿದ್ದೇ ಈ ಸರಕಾರದ ಸಾಧನೆ. ರಾಜ್ಯಕ್ಕೆ ಇಂತಹ ಕೆಟ್ಟ ಸರಕಾರ ಇತಿಹಾಸದಲ್ಲಿಯೇ ಬಂದಿಲ್ಲ. ಹಿಂದಿನ ಸರಕಾರದ ಅವಧಿಯಲ್ಲಿ ಹಲವು ಪ್ರಕರಣಗಳನ್ನು ಗಮನಿಸಿದ್ದೇವೆ. ಜನತೆಯ ತೆರಿಗೆ ಹಣದಲ್ಲಿ ಸ್ವೇಚ್ಛಾಚಾರದ ರೀತಿ ಲೂಟಿ ಮಾಡಿದ್ದಾರೆ. ಆಡಳಿತ ಸುಧಾರಣೆ ಬದಲಿಗೆ ಹಿಮ್ಮುಖ ಚಲನೆಗೆ ಈ ಸರಕಾರ ಕಾರಣವಾಗಿದೆ' ಎಂದು ಕುಮಾರಸ್ವಾಮಿ ದೂರಿದರು.
ಇದೀಗ ರಾಜ್ಯದಲ್ಲಿ ಮಳೆ ಬೀಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಗೆ ಗ್ರಾಸವಾಗಿರುವುದು ದುರಾದೃಷ್ಟಕರ ಸಂಗತಿ. 2019ರಿಂದ ದೊಡ್ಡಮಟ್ಟದಲ್ಲಿ ಮಳೆ ಅನಾಹುತವಾಯಿತು. ಜತೆಗೆ ಕೋವಿಡ್ ಸಮಯದಲ್ಲಿಯೂ ಜನ ಸಂಕಷ್ಟಕ್ಕೊಳಗಾದರು. ಆದರೆ, ಬಿಜೆಪಿ ಪಕ್ಷ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಾಯಕತ್ವ ಬದಲಾವಣೆಯಲ್ಲಿಯೇ ಮುಳುಗಿದೆ. ಇದು ನಾಡಿನ ದೌಭಾರ್ಗ ಎಂದು ಕುಮಾರಸ್ವಾಮಿ ಟೀಕಿಸಿದರು.