`ಅಗ್ರಿಕಲ್ಚರಲ್ ಗ್ರ್ಯಾಂಡ್ ಚಾಲೆಂಜಸ್' ಸ್ಪರ್ಧೆ: ವಿಜೇತ ನವೋದ್ಯಮಗಳಿಗೆ 25 ಲಕ್ಷ ರೂ.ವರೆಗೆ ಅನುದಾನ

Update: 2021-07-23 15:34 GMT

ಬೆಂಗಳೂರು, ಜು. 23: `ದೇಶದ ಮುಂಚೂಣಿ ಜೈವಿಕ ವಿಜ್ಞಾನಗಳ ತಾಂತ್ರಿಕತೆ ಹಾಗೂ ನಾವೀನ್ಯತಾ ಕೇಂದ್ರವಾದ ಸಿ-ಕ್ಯಾಂಪ್ (ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಪ್ಲ್ಯಾಟ್ ಫಾಮ್ರ್ಸ್) ಸಂಸ್ಥೆಯು ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಿಗೆ ನಾವೀನ್ಯತಾ ಪರಿಹಾರಗಳನ್ನು ಉತ್ತೇಜಿಸಲು ಮೊತ್ತಮೊದಲ ಬಾರಿಗೆ ರಾಷ್ಟ್ರಮಟ್ಟದ `ಅಗ್ರಿಕಲ್ಚರಲ್ ಗ್ರ್ಯಾಂಡ್ ಚಾಲೆಂಜಸ್' ಸ್ಪರ್ಧೆಯನ್ನು ಪ್ರಕಟಿಸಿದೆ. 

ಕೃಷಿ ತಾಂತ್ರಿಕತೆಗಾಗಿ ಇರುವ ರಾಜ್ಯದ ಕೆ-ಟೆಕ್ ಉತ್ಕೃಷ್ಠತಾ ಕೇಂದ್ರವು ಕೃಷಿ ಇಲಾಖೆ ಹಾಗೂ ಐಟಿ/ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಸ್ಪರ್ಧೆ ಕುರಿತು ಪ್ರಕಟಿಸಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ನವೋದ್ಯಮಿಗಳನ್ನು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವ ಮೂಲಕ ಕೃಷಿ ವಲಯದಲ್ಲಿ ಆರ್ಥಿಕ ಕಾರ್ಯಸಾಧುವಾದ, ಪರಿಹಾರ ಕೇಂದ್ರಿತವಾದ, ಅತ್ಯಾಧುನಿಕ ವಿಜ್ಞಾನ ಹಾಗೂ ತಾಂತ್ರಿಕತೆ ಆಧಾರಿತ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲಾಗುತ್ತದೆ ಎಂದರು. 

ದೇಶದ ಕೃಷಿ ವಲಯದ ಪ್ರಮುಖ ಬಿಕ್ಕಟ್ಟುಗಳಿಗೆ ಆಧುನಿಕ ತಂತ್ರಜ್ಞಾನ ಬಳಸಿ ನಾವೀನ್ಯತಾ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಈ ಸ್ಪರ್ಧೆ ಗುರಿ ನೀಡುತ್ತದೆ. ಇದರಲ್ಲಿ ಗೆಲುವು ಕಂಡವರಿಗೆ ನವೋದ್ಯಮಕ್ಕಾಗಿ ರೂ 25 ಲಕ್ಷದವರೆಗೆ ಅನುದಾನ ನೀಡುವ ಜೊತೆಗೆ ಸಿ-ಕ್ಯಾಂಪ್ ವತಿಯಿಂದ ಪರಿಷಕತ್ವ ಹಾಗೂ ಮಾರ್ಗದರ್ಶನ ಸೌಲಭ್ಯ ಒದಗಿಸಲಾಗುತ್ತದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು. 

ನವೋದ್ಯಮ ಸಹಭಾಗಿತ್ವಕ್ಕಾಗಿ `ಇಂಡೋ-ಇಸ್ರೇಲ್ ಇನ್ನೊವೇಷನ್ ಬ್ರಿಜ್' ಒಡಂಬಡಿಕೆ: ಇದೇ ಸಂದರ್ಭದಲ್ಲಿ `ಇಂಡೋ-ಇಸ್ರೇಲ್ ಇನ್ನೊವೇಷನ್ ಬ್ರಿಜ್'ಗಾಗಿ ಪರಸ್ಪರ ತಿಳಿವಳಿಕೆ ಒಪ್ಪಂದ (ಎಂಒಯು) ಏರ್ಪಟ್ಟಿತು. ಎರಡೂ ದೇಶಗಳ, ಜೀವವಿಜ್ಞಾನಗಳು ಮತ್ತು ಕೃಷಿ ತಾಂತ್ರಿಕತೆ ಕ್ಷೇತ್ರದ ನವೋದ್ಯಮಗಳ ನಡುವೆ ಸಹಭಾಗಿತ್ವ ಹೆಚ್ಚಿಸುವ ಉದ್ದೇಶವನ್ನು ಇದು ಹೊಂದಿದೆ ಎಂದರು. 

ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲ್ ಜನರಲ್ ಡಾ.ಜೊನಾಥನ್ ಜಡ್ಕಾ ಮಾತನಾಡಿ, `ಈ ಒಡಂಬಡಿಕೆಯಿಂದಾಗಿ ಎರಡೂ ದೇಶಗಳ ನವೋದ್ಯಮಗಳ ನಡುವೆ ಸಹಕಾರ ಹೆಚ್ಚಾಗಲಿದೆ. ಇದು, ಪರಸ್ಪರ ದೇಶಗಳ ಪರಿಣತ ವಲಯಗಳನ್ನು ಒಂದೇ ವೇದಿಕೆಯಡಿ ತಂದು ಆಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಭಾಗಿತ್ವದ ವಾತಾವರಣವನ್ನು ರೂಪಿಸುತ್ತದೆ' ಎಂದರು. 

ಇದೇ ಸಂದರ್ಭದಲ್ಲಿ, ಸಿ-ಕ್ಯಾಂಪ್ ನೆರವಿನಿಂದ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್-19 ಲಸಿಕೆಯನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾದ ಕೋಲ್ಡ್ ಚೈನ್ ತಾಂತ್ರಿಕತೆಯ ಬಾಕ್ಸ್‍ಅನ್ನು ಸರರ್ಕಾರಕ್ಕೆ ಹಸ್ತಾಂತರಿಸಲಾಯಿತು. 

ಎನ್ ಸಿಬಿಎಸ್ ನಿರ್ದೇಶಕ ಪ್ರೊ.ಸತ್ಯಜಿತ್ ಮೇಯರ್, ಇನ್ ಸ್ಟೆಮ್ ನಿರ್ದೇಶಕ ಪ್ರೊ.ಅಪೂರ್ವ ಸರಿನ್, ಐಟಿ/ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ಸಿ-ಕ್ಯಾಂಪ್ ಸಿಇಒ ಮತ್ತು ನಿರ್ದೇಶಕ ತಸ್ಲೀಂ ಆರೀಫ್ ಸಯ್ಯದ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News