×
Ad

ಮಲೆನಾಡಿನಲ್ಲಿ ಪುಷ್ಯ ಮಳೆಯ ಅಬ್ಬರ: ಜಲಾವೃತಗೊಂಡ ಆರೋಗ್ಯ ಕೇಂದ್ರ, ಮನೆಗಳಿಗೆ ಹಾನಿ

Update: 2021-07-23 21:51 IST

ಶಿವಮೊಗ್ಗ,ಜು.23:ಪುಷ್ಯ ಮಳೆಯ ಅಬ್ಬರಕ್ಕೆ ಮಲೆನಾಡು ಶಿವಮೊಗ್ಗ ನಲುಗಿಹೋಗಿದೆ.ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೆ ವರುಣ ಅಬ್ಬರಿಸುತ್ತಿದ್ದಾನೆ.ಮಳೆಯ ರೌದ್ರ ನರ್ತನಕ್ಕೆ ಜನಜೀವನ ಅಸ್ತವ್ಯಸ್ಥವಾಗಿದೆ.

ಮಲೆನಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೆ,ಅರೆ ಮಲೆನಾಡು ಪ್ರದೇಶದಲ್ಲಿ ಸೋನೆ ರೀತಿಯಲ್ಲಿ ಮಳೆಯಾಗುತ್ತಿದೆ.ಸಾಗರ, ಹೊಸನಗರ,ತೀರ್ಥಹಳ್ಳಿಯಲ್ಲಿ ವರುಣ ಅಬ್ಬರಿಸುತ್ತಿದ್ದಾನೆ.ಇನ್ನೂ ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು,ನದಿಗಳು ಮೈದುಂಬಿ ಹರಿಯುತ್ತಿವೆ.ಜಿಲ್ಲೆಯ ಹಲವೆಡೆ ಕೆರೆಗಳ ಕೋಡಿ ಬಿದ್ದಿವೆ.ಮಳೆಯಿಂದಾಗಿ ನದಿಗಳು ಅಪಾಯ ಮಟ್ಟ ತಲುಪಿವೆ.ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ,ತುಂಗಾ,ಭದ್ರಾ ಹಾಗೂ ಮಾಣಿ ಡ್ಯಾಂ ಗಳ ಒಳಹರಿವು ಹೆಚ್ಚಾಗಿದೆ.

ತುಂಗಾ ಜಲಾನಯನ ಪ್ರದೇಶಗಳಾದ ಕೊಪ್ಪ,ಶೃಂಗೇರಿ, ತೀರ್ಥಹಳ್ಳಿಯಲ್ಲಿ ಮಳೆ ಹೆಚ್ಚಾಗಿದ್ದರಿಂದ ತುಂಗಾನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ.ತುಂಗಾ ಜಲಾಶಯಕ್ಕೆ 48323 ಕ್ಯೂಸೆಕ್ ಒಳಹರಿವು ಇದ್ದು,ಡ್ಯಾಮಿನ ಎಲ್ಲಾ ಗೇಟ್ ಗಳನ್ನು ತೆರೆದಿರುವುದರಿಂದ ನೀರನ್ನು ಹೊಳೆಗೆ ಬೀಡಲಾಗಿದೆ.ನದಿ ಪಾತ್ರದ ಜನರು ಎಚ್ಚರಿಕೆಯಿಂದರಲು ಸೂಚನೆ ನೀಡಲಾಗಿದೆ.

ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 3 ಅಡಿ ನೀರು ಬಂದಿದ್ದು,೧೫೧೦೦೦ ಸಾವಿರ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.ನದಿಯ ನೀರಿನ ಮಟ್ಟ 1799 ಅಡಿಗೆ ಏರಿದ್ದು,ಜಲಾಶಯದ ಗರಿಷ್ಠ ಮಟ್ಟ 1819 ಅಡಿಯಾಗಿದೆ.ಕಳೆದ 24ತಾಸಿನಲ್ಲಿ ಜಲಾನಯನ ಪ್ರದೇಶದಲ್ಲಿ 140 ಮೀಲಿ ಲೀಟರ್ ಮಳೆಯಾಗಿದೆ.
ಭದ್ರಾ ಡ್ಯಾಂ ಗೆ 39286 ಕ್ಯೂಸೆಕ್  ಒಳಹರಿವು ಇದ್ದು,ಒಂದೇ ದಿನದಲ್ಲಿ 3 ಅಡಿ ನೀರು ಬಂದಿದೆ.ಡ್ಯಾಮಿನ ನೀರಿನ ಮಟ್ಟ 171.1 ಅಡಿಗೆ ತಲುಪಿದೆ.ಭದ್ರಾ ನದಿ ನಾಲೆಗಳಿಗೆ ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.ನಾಲಾ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ  ಕಾಡಾ ಈ ನಿರ್ಧಾರ ಕೈಗೊಂಡಿದೆ.

ಆರೋಗ್ಯ ಕೇಂದ್ರ ಜಲಾವೃತ:

ಶಿವಮೊಗ್ಗ ತಾಲೂಕು ಚೋರಡಿಯಲ್ಲಿ ಹೆಗ್ಗೆರೆ ಕೆರೆ ಕೋಡಿ ನೀರು ಹಳ್ಳದ ತುಂಬಾ ಹರಿದು ಗ್ರಾಮ ಪಂಚಾಯಿತಿ ಕಛೇರಿ ಆವರಣ,ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣ ಸಂಪೂರ್ಣ ಜಲಾವೃತಗೊಂಡಿದೆ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂದರ್ಭದಲ್ಲಿ ಕೋಡಿ ನೀರು ಹರಿಯುವ ಹಳ್ಳದ ಸೇತುವೆಯನ್ನು ಎತ್ತರಿಸಿರುವುದರಿಂದ ಹಳ್ಳದ ನೀರಿನ ಹರಿವಿಗೆ ತಡೆಯೊಡ್ಡಿದಂತಾಗಿ ನೀರು ತಗ್ಗಿಗೆ ಹರಿಯುತ್ತಿದೆ.ಮತ್ತೊಂದು ಕಡೆ ಚೋರಡಿ ಗ್ರಾಮದ ಅಂಗಡಿ ಮತ್ತು ವಸತಿ ಪ್ರದೇಶದಲ್ಲಿ ಮಾತ್ರ ಚರಂಡಿ  ನಿರ್ಮಿಸಿ ಅರ್ಧಬರ್ದ ಕಾಮಗಾರಿ ಮಾಡಿ ನಿಲ್ಲಿಸಲಾಗಿದೆ.ಪಂಚಾಯಿತಿ ಆವರಣಕ್ಕೆ ನೀರು ನುಗ್ಗಲು ಇದು  ಸಹ ಕಾರಣವಾಗಿದೆ.

ಮನೆಗೆ ಹಾನಿ:

ಸಾಗರ ತಾಲೂಕಿನ ಬೇಳೂರು ಗ್ರಾಮದ ಚನ್ನಪ್ಪ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.ಬೆಳ್ಳಣ್ಣೆ ಗ್ರಾಮದ ಗಿಳಿಗಾರು ಮಜಿರೆಯಲ್ಲಿ  ಮಳೆಗೆ ಹಾನಿಯಾಗಿದೆ.ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಕಂದಾಯ ಇಲಾಖೆ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೇ ಸಾಗರದ ಪಟ್ಟಣದ ವಿವಿಧ ಬಡಾವಣೆಗಳು ಜಲಾಗೃತಗೊಂಡಿವೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.ಚರಂಡಿಗಳು ಭರ್ತಿಯಾಗಿ ಕೆಳದಿ ರಸ್ತೆಯಮೇಲೆ ನೀರು ಹರಿಯುತ್ತಿದೆ.ಅಲ್ಲದೇ ವಿನೋಬ ನಗರದ ಲೇಔಟ್ ಒಂದಕ್ಕೆ ನೀರು ನುಗ್ಗಿದೆ.ರಸ್ತೆಗಳು ಜಲಾವೃತಗೊಂಡಿದ್ದರಿಂದ ಮನೆಗಳಿಂದ ಜನರು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಬೆಳಿಗ್ಗೆಯಿಂದಲೇ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ.ಜಲಾವೃತಗೊಂಡ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ಪುನರ್ವಸತಿ ಕೇಂದ್ರ ಆರಂಭ:
ಸಾಗರ ತಾಲೂಕಿನಲ್ಲಿ ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ ಎಂದು ಶಾಸಕರ ಕಾರ್ಯಾಲಯದಿಂದ ಮಾಹಿತಿ ನೀಡಿದ್ದಾರೆ.9480010111 ನಂಬರ್‌ಗೆ ಸಂಪರ್ಕಿಸಲು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News