×
Ad

ಆಗಸ್ಟ್ ನಲ್ಲಿ ಮೈಸೂರು ರಸ್ತೆ-ಕೆಂಗೇರಿ ನಡುವೆ ಮೆಟ್ರೋ ಸಂಚಾರ

Update: 2021-07-23 22:03 IST

ಬೆಂಗಳೂರು, ಜು.23: ನಮ್ಮ ಮೆಟ್ರೋದ ಮೈಸೂರು ರಸ್ತೆ-ಕೆಂಗೇರಿ ವಿಸ್ತರಿತ ಮಾರ್ಗ ಜನರ ಸಂಚಾರಕ್ಕೆ ಆಗಸ್ಟ್ ನಲ್ಲಿ ಮುಕ್ತವಾಗುವ ಸಾಧ್ಯತೆ ಇದೆ. ಈಗಾಗಲೇ ಬಿಎಂಆರ್ ಸಿಎಲ್ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ.

ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗವನ್ನು ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಬೇಕು. ಜು.24ರಂದು ಸಿಆರ್‍ಎಸ್ ಪರಿಶೀಲನೆ ನಡೆಯಲಿದೆ. ಬಳಿಕ 15 ದಿನದಲ್ಲಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಗಲಿದೆ.

ನಮ್ಮ ಮೆಟ್ರೋ ಪೂರ್ವ ಪಶ್ಚಿಮ ಕಾರಿಡಾರ್‍ನಲ್ಲಿ ಬೈಯಪ್ಪನಹಳ್ಳಿ-ಮೈಸೂರು ರಸ್ತೆ (ನಾಯಂಡಹಳ್ಳಿ) ತನಕ ಮೆಟ್ರೋ ಸಂಚಾರ ನಡೆಸುತ್ತಿದೆ. ಈ ಮಾರ್ಗವನ್ನು ಚಲ್ಲಘಟ್ಟ ತನಕ ವಿಸ್ತರಣೆ ಮಾಡಲಾಗಿದೆ.

ಪ್ರಸ್ತುತ ಮೈಸೂರು ರಸ್ತೆ-ಕೆಂಗೇರಿ ಬಸ್ ಟರ್ಮಿನಲ್ ತನಕ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 7.5 ಕಿ. ಮೀ. ಉದ್ದದ ಮಾರ್ಗವನ್ನು ಚಲ್ಲಘಟ್ಟ ತನಕ ವಿಸ್ತರಣೆ ಮಾಡಲಾಗುತ್ತಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ.
ನಿಲ್ದಾಣಗಳು: ನಾಯಂಡಹಳ್ಳಿ ಬಳಿಕ ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಮೈಲಸಂದ್ರ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣಗಳಿವೆ. ಮುಂದೆ ಚಲ್ಲಘಟ್ಟ ನಿಲ್ದಾಣ ಈ ಮಾರ್ಗಕ್ಕೆ ಸೇರಲಿದೆ.

ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಕಳೆದ ತಿಂಗಳು ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಾಗಿದೆ. ಸಿಆರ್ ಎಸ್ ಪರಿಶೀಲನೆ ಬಳಿಕ ವಾಣಿಜ್ಯ ಸಂಚಾರಕ್ಕೆ ಅವಕಾಶ ಸಿಗಲಿದೆ. ಆಗಸ್ಟ್ 15ರಂದು ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ನೇರಳೆ ಮಾರ್ಗದ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರ ನಡೆಸುವುದರಿಂದ 75 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಆರ್.ಆರ್.ನಗರ ಸೇರಿದಂತೆ ಸುತ್ತಮತ್ತಲಿನ ಬಡಾವಣೆಗಳ ಜನರಿಗೆ ಮೆಟ್ರೋ ಸಂಪರ್ಕ ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News