‘ಬಡವರ ಬ್ಯಾಂಕರ್’ ಯೂನುಸ್ ಗೆ ಒಲಿಂಪಿಕ್ಸ್ ಗೌರವ ಪ್ರದಾನ

Update: 2021-07-23 16:59 GMT
photo: twitter/@Yunus_Centre
 

ಟೋಕ್ಯೋ, ಜು.23: ಬಾಂಗ್ಲಾದೇಶದ ಪ್ರಜೆ, ಬಡವರ ಬ್ಯಾಂಕರ್ ಎಂದೇ ಹೆಸರಾದ ಮುಹಮ್ಮದ್ ಯೂನುಸ್ ಗೆ ಶುಕ್ರವಾರ ರಾತ್ರಿ ನಡೆದ ಟೋಕ್ಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಕ್ಸ್ ಗೌರವ ಪ್ರದಾನ ಮಾಡಲಾಗಿದೆ. ಶಿಕ್ಷಣ, ಸಂಸ್ಕತಿ, ಮತ್ತು ಕ್ರೀಡೆಯ ಮೂಲಕ ಶಾಂತಿ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವವರನ್ನು ಗುರುತಿಸಿ ಸನ್ಮಾನಿಸುವ ಈ ಪ್ರತಿಷ್ಟಿತ ಗೌರವವನ್ನು 2016ರಲ್ಲಿ ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಆರಂಭಿಸಿದ್ದು, ಈ ಪ್ರಶಸ್ತಿ ಪಡೆ 2ನೇ ಸಾಧಕರಾಗಿದ್ದಾರೆ ಯೂನುಸ್.

 ಬ್ಯಾಂಕಿಂಗ್ ಉದ್ಯಮಿಯಾಗಿರುವ ಯೂನುಸ್, ಗ್ರಾಮೀಣ ಬ್ಯಾಂಕ್ ಆರಂಭಿಸಿ ವಿಶ್ವದಾದ್ಯಂತದ ಬಡಜನರಿಗೆ ನೆರವಾಗುವ ಕಾರ್ಯಕ್ಕೆ ತನ್ನ ಬದುಕನ್ನು ಮುಡಿಪಾಗಿಟ್ಟವರು. ಯಾವುದೇ ಪೂರಕ ಭದ್ರತೆ(ಜಾಮೀನು)ಯ ಅಗತ್ಯವಿಲ್ಲದೆ ಬಡವರಿಗೆ ಸುಲಭದಲ್ಲಿ, ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ನೀಡುತ್ತಿದ್ದರಿಂದ ಅವರಿಗೆ ‘ಬಡವರ ಬ್ಯಾಂಕರ್’ ಎಂಬ ಹೆಸರಿದೆ. 2006ರಲ್ಲಿ ಅವರಿಗೆ ನೋಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ.

ವೀಡಿಯೊ ಲಿಂಕ್ ಮೂಲಕ ಢಾಕಾದಲ್ಲಿರುವ ತನ್ನ ಮನೆಯಲ್ಲಿ ಕುಳಿತೇ ಒಲಿಂಪಿಕ್ಸ್ ಗೌರವ ಪುರಸ್ಕಾರ ಪಡೆದ 81 ವರ್ಷದ ಯೂನುಸ್, ಬಾಂಗ್ಲಾದೇಶದ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೊಂದು ಗಮನಾರ್ಹ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಬ್ಯಾಂಕಿಂಗ್ ಉದ್ಯಮದ ಜೊತೆಗೆ, ಐಒಸಿಯ ‘ಕ್ರೀಡಾಪಟುಗಳನ್ನು ಯುವ ನಾಯಕರನ್ನಾಗಿ ರೂಪಿಸುವ’ ಕಾರ್ಯಕ್ರಮದಲ್ಲೂ ಯೂನುಸ್ ನೆರವು ನೀಡುತ್ತಿದ್ದಾರೆ. 1940ರಲ್ಲಿ ಚಿತ್ತಗಾಂಗ್ನಲ್ಲಿ ಜನಿಸಿದ ಯೂನುಸ್ ಡಾಕಾ ವಿವಿಯಿಂದ ಪದವಿ ಪಡೆದು 1974ರಲ್ಲಿ ತನ್ನದೇ ಬ್ಯಾಂಕಿಂಗ್ ಉದ್ಯಮ ಆರಂಭಿಸಿದ್ದರು. 1983ರಲ್ಲಿ ಗ್ರಾಮೀಣ ಬ್ಯಾಂಕ್ ಎಂಬ ವಿಶಿಷ್ಟ ಯೋಜನೆ ರೂಪಿಸಿ ಬಡವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಉಪಕ್ರಮ ಆರಂಭಿಸಿದ್ದು 2007ರವರೆಗೆ ಇವರ ಬ್ಯಾಂಕ್ನಿಂದ 7.4 ಮಿಲಿಯನ್ ಜನರಿಗೆ 6.38 ಮಿಲಿಯನ್ ಡಾಲರ್ ಸಾಲ ನೀಡಲಾಗಿದೆ.

ಯುವ ಕ್ರೀಡಾಪಟುಗಳನ್ನು ಸಾಮಾಜಿಕ ಬದ್ಧತೆಯುಳ್ಳ ಉದ್ಯಮಿಗಳನ್ನಾಗಿ ರೂಪಿಸುವ ಕಾರ್ಯದಲ್ಲಿ ಯೂನುಸ್ ಸಮಗ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಐಒಸಿಯ ಅಧ್ಯಕ್ಷ ಥಾಮಸ್ ಬ್ಯಾಕ್ ಶ್ಲಾಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News