×
Ad

ಡಬಲ್ ಇಂಜಿನ್ ಸರಕಾರದ ಇಂಜಿನ್ ಫೇಲ್ ಆಗಿದೆ: ದಿನೇಶ್ ಗುಂಡೂರಾವ್ ವ್ಯಂಗ್ಯ

Update: 2021-07-23 22:30 IST

ಬೆಂಗಳೂರು, ಜು. 23: `ಮುಖ್ಯಮಂತ್ರಿ ಬದಲಾವಣೆ ಬಿಜೆಪಿಯ ಆಂತರಿಕ ವಿಚಾರ. ಆದರೆ, ಬಿಜೆಪಿ ನಾಯಕತ್ವ ಬದಲಾವಣೆ ಗೊಂದಲ ಇಡೀ ಆಡಳಿತ ಯಂತ್ರವನ್ನೇ ನಿಷ್ಕ್ರಿಯಗೊಳಿಸಿದೆ. ಜನ ಇವರ ಹುಚ್ಚಾಟ ನೋಡಿ ರೇಜಿಗೆ ಪಟ್ಟುಕೊಳ್ಳುತ್ತಿದ್ದಾರೆ. ಡಬಲ್ ಇಂಜಿನ್ ಸರಕಾರದ ಇಂಜಿನ್ ಫೇಲ್ ಆಗಿದೆ. ಸತ್ತಂತಿರುವ ಈ ಸರಕಾರವನ್ನು ಬಡಿದೆಚ್ಚರಿಸುವುದೇಗೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ನೆರೆಯಂತಹ ಪ್ರಾಕೃತಿಕ ಭೀಕರ ಸನ್ನಿವೇಶದಲ್ಲಿ ಸರಕಾರ ಜನರ ಬೆನ್ನಿಗೆ ನಿಲ್ಲಬೇಕು, ಆದರೆ ಬಿಜೆಪಿ ಸರಕಾರದಲ್ಲಿರುವವರು ಸಂಕಷ್ಟದಲ್ಲಿರುವ ಜನರ ಬಗ್ಗೆ ಸೊಲ್ಲು ಎತ್ತುತ್ತಿಲ್ಲ. ಸರಕಾರದಲ್ಲಿರುವವರಿಗೆ ನೆರೆ ನಿರ್ವಹಣೆಗಿಂತ ಸಿಎಂ ಪಟ್ಟ ಗಳಿಸುವುದೇಗೆ ಎಂಬುದೇ ಚಿಂತೆಯಾಗಿದೆ. ಇಂತಹ ಹೊಣೆಗೇಡಿ ಸರಕಾರ ಇರುವುದು ಯಾವ ಪುರುಷಾರ್ಥಕ್ಕೆ?' ಎಂದು ಆಕ್ರೋಶ ಹೊರಹಾಕಿದ್ದಾರೆ.

`ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಕೋತಿ ಕುಣಿಸುವ ಆಟವಾಡುತ್ತಿದ್ದರೆ, ರಾಜ್ಯ ಬಿಜೆಪಿ ನಾಯಕರು ಕೋತಿಗಳಂತೆ ಕುಣಿಯುತ್ತಿದ್ದಾರೆ. ರಾಜ್ಯ ನೆರೆ ಸಂಕಷ್ಟದಲ್ಲಿದೆ, ಬಹುತೇಕ ಕಡೆ ಮಹಾಮಳೆಯಿಂದ ಜನ-ಜಾನುವಾರುಗಳು ತೊಂದರೆಗೊಳಗಾಗಿವೆ. ಈ ಸಂದರ್ಭದಲ್ಲಿ ನೆರೆ ನಿರ್ವಹಣೆ ಮಾಡಬೇಕಾದ ಸರಕಾರ ಜನಹಿತ ಮರೆತು ಅಧಿಕಾರಕ್ಕಾಗಿ ಕಿತ್ತಾಡುತ್ತಿದೆ' ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News