ಆನ್ ಲೈನ್ ಮೂಲಕ ಟ್ವಿಟರ್ ಇಂಡಿಯಾ ಎಂಡಿ ವಿಚಾರಣೆಗೆ ಹೈಕೋರ್ಟ್ ಆದೇಶ

Update: 2021-07-23 17:20 GMT

ಬೆಂಗಳೂರು, ಜು.23: ಕೋಮು ಸೂಕ್ಷ್ಮ ವೀಡಿಯೊ ಟ್ವೀಟ್ ಹಿನ್ನೆಲೆಯಲ್ಲಿ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಯುಪಿ ಪೊಲೀಸರು ನೀಡಿದ್ದ ಸಮನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ತನಿಖೆ ಸಂಬಂಧ ಪೊಲೀಸರಿಂದ ಕಿರುಕುಳ ಆಗಬಾರದು ಹಾಗೂ ಮನೀಶ್ ಅವರ ವಿಚಾರಣೆಯನ್ನು ವರ್ಚುವಲ್ ಮೂಲಕ ನಡೆಸಬಹುದು ಎಂದು ಆದೇಶಿಸಿದೆ. 

ಟ್ವಿಟರ್ ಪ್ಲಾಟ್‍ಫಾರ್ಮ್‍ನಲ್ಲಿ ಬಳಕೆದಾರರೊಬ್ಬರು ಅಪ್‍ಲೋಡ್ ಮಾಡಿದ ಕೋಮು ಸೂಕ್ಷ್ಮ ವಿಡಿಯೊದ ತನಿಖೆಯ ಭಾಗವಾಗಿ ಉತ್ತರಪ್ರದೇಶ ಪೊಲೀಸರು ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಮಹೇಶ್ವರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. 
ಟ್ವಿಟರ್ ಸಂಸ್ಥೆಗೆ ಮನೀಶ್ ಮಹೇಶ್ವರಿ ಮುಖ್ಯಸ್ಥರಲ್ಲ. ಪ್ರಕರಣದಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ. ಟ್ವಿಟರ್‍ನ ಆಡಳಿತದಲ್ಲಿ ಮನೀಶ್ ಅವರ ಪಾತ್ರವಿಲ್ಲ. ಟ್ವಿಟರ್ ಕಂಟೆಂಟ್ ಮೇಲೆ ಮನೀಶ್‍ಗೆ ನಿಯಂತ್ರಣವಿಲ್ಲ. ಹೀಗಾಗಿ ತನಿಖೆ ನೆಪದಲ್ಲಿ ಕಿರುಕುಳವಾಗಬಾರದು ನ್ಯಾಯಪೀಠ ತಿಳಿಸಿದೆ. 

ಗಾಜಿಯಾಬಾದ್‍ನಲ್ಲಿ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ಮಾಡಿ, ಗಡ್ಡ ಬೋಳಿಸಿದ ಘಟನೆ ಸಂಬಂಧ ಟ್ವಿಟ್ಟರ್‍ನಲ್ಲಿ ವಿಡಿಯೋ ಶೇರ್ ಆಗಿತ್ತು. ಈ ವಿಡಿಯೋಗೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿಗೆ ಗಾಜಿಯಾಬಾದ್ ಪೊಲೀಸರು ನೋಟಿಸ್ ನೀಡಿದ್ದರು. 
ಮನೀಶ್ ಪರ ವಾದ ಮಂಡಿಸಿದ ವಕೀಲರು, ತನ್ನ ಕಕ್ಷಿದಾರರು ಟ್ವಿಟ್ಟರ್ ಇಂಡಿಯಾದ ಮಾರ್ಕೆಟಿಂಗ್, ಸೇಲ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾರೆ. ಮನೀಶ್ ಟ್ವಿಟ್ಟರ್ ಇಂಡಿಯಾ ಮುಖ್ಯಸ್ಥರಲ್ಲ. ಟ್ವಿಟ್ಟರ್‍ನಲ್ಲಿನ ಕಂಟೆಂಟ್ ವಿಷಯ, ಸುಳ್ಳು ಸುದ್ದಿ ಪ್ರಸರಣಕ್ಕೂ ನನ್ನ ಕಕ್ಷಿದಾರರಿಗೂ ಯಾವುದೇ ಸಂಬಂಧವಿಲ್ಲ. ಟ್ವಿಟರ್ ಕಂಟೆಂಟ್ ಮೇಲೆ ಮನೀಶ್ ನಿಯಂತ್ರಣವಿರುವುದಿಲ್ಲ.

ಹೀಗಾಗಿ, ಸಮನ್ಸ್ ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ್ದರು. ವಿಚಾರಣೆ ನಡೆಸುವುದಾದರೆ ವರ್ಚುವಲ್ ಮೂಲಕ ನಡೆಸಬೇಕು. ಅದನ್ನು ಬಿಟ್ಟು ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗಿ ಎನ್ನುವುದು ಕಿರುಕುಳ ಕೊಟ್ಟಂತೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮನೀಶ್ ಅವರ ವಿರುದ್ಧ ಸಿಆರ್‍ಪಿಸಿ 41ಎ ನೋಟಿಸನ್ನು ಸಿಆರ್‍ಪಿಸಿ 160ಕ್ಕೆ ಮಾರ್ಪಾಡು ಮಾಡುವಂತೆ ಕೋರ್ಟ್ ಸೂಚಿಸಿದೆ. ಇದರಿಂದ ಮನೀಶ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News