ಬಿಜೆಪಿಯಲ್ಲಿ ದಲಿತ, ಹಿಂದುಳಿದ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ: ಕಾಂಗ್ರೆಸ್ ಆಕ್ರೋಶ

Update: 2021-07-23 17:38 GMT

ಬೆಂಗಳೂರು, ಜು. 23: `ಬಿ.ಎಸ್.ಯಡಿಯೂರಪ್ಪ ನಂತರ ಯಾರು ಮುಂದಿನ ಸಿಎಂ? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಹೆಸರುಗಳ ಹಿಡಿದುಕೊಂಡು ಮಾಧ್ಯಮಗಳು ವಿಶ್ಲೇಷಿಸುತ್ತಿವೆ, ಆ ಹೆಸರುಗಳಲ್ಲಿ ಒಬ್ಬರೇ ಒಬ್ಬರ ದಲಿತರ ಹೆಸರಿಲ್ಲ, ಹಿಂದುಳಿದವರ ಹೆಸರಿಲ್ಲ. ಬಿಜೆಪಿ ಪಕ್ಷದಲ್ಲಿ ದಲಿತ, ಹಿಂದುಳಿದವರನ್ನು ನಾಯಕರಾಗಿ ಬೆಳೆಯಲು ಬಿಡದೆ ಅದುಮಿಡಲಾಗಿದೆ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಮನುವಾದಿ ಬಿಜೆಪಿ ತನ್ನಲ್ಲಿರುವ ದಲಿತರನ್ನು ಕಾಲಾಳುಗಳಂತೆ ಬಳಸಿಕೊಂಡಿತೇ ಹೊರತು ನಾಯಕರಾಗಿ ಬೆಳೆಯಲು ಬಿಡಲೇ ಇಲ್ಲ. ಬಿಜೆಪಿ ದಲಿತರನ್ನು ಸಿಎಂ ಮಾಡುವುದು ಕನಸಿನ ಮಾತು, ಕನಿಷ್ಠ ಪಕ್ಷ ಸಿಎಂ ಹುದ್ದೆಯ ರೇಸ್‍ನಲ್ಲಿಯೂ ಇಲ್ಲದಿರುವುದು ಬಿಜೆಪಿಯಲ್ಲಿ ದಲಿತ ನಾಯಕರಿಗೆ ಸ್ವತಂತ್ರವಿಲ್ಲದಂತಿರುವುದಕ್ಕೆ ಸಾಕ್ಷಿ' ಎಂದು ಟೀಕಿಸಿದೆ.

`ರಾಜ್ಯಕ್ಕೆ ಗಂಡಾಂತರ ಎದುರಾದಾಗಲೆಲ್ಲಾ ಬಿಜೆಪಿ ಸರಕಾರದ ಕಚ್ಚಾಟ ತಾರಕಕ್ಕೇರುತ್ತದೆ. ನೆರೆಯಿಂದಾಗಿ ಜನರ ಆಸ್ತಿಪಾಸ್ತಿ ಹಾಳಾಗಿದೆ, ಮನೆಗಳನ್ನ ಕಳೆದುಕೊಂಡಿದ್ದಾರೆ, ರೈತರ ಪಾಡು ಇನ್ನೂ ಭೀಕರ, ಬಹುತೇಕ ಎಲ್ಲ ಬಗೆಯ ಬೆಳೆಗಳೂ ನಷ್ಟಗೊಂಡಿದೆ. ಜನರ ಬಳಿಗೆ ಓಡಬೇಕಿರುವ ಈ ಸಂದರ್ಭದಲ್ಲಿ ದಿಲ್ಲಿಗೆ ಓಡುತ್ತಿದ್ದಾರೆ ಬಿಜೆಪಿ ನಾಯಕರು' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

`ಬಿಜೆಪಿ ಕುಟುಂಬ ರಾಜಕಾರಣದ ಮಾತಾಡುವುದು `ಕಳ್ಳ ಬೆಕ್ಕು ಸನ್ಯಾಸಿ ವೇಷ ಧರಿಸಿದಂತೆ' ಎನ್ನುತ್ತಿದ್ದರಂತೆ ಯತ್ನಾಳ್!
ಕಾಂಗ್ರೆಸ್‍ನಲ್ಲಿ ಹಲವು ದಲಿತ ನಾಯಕರು ಸಿಎಂಗೆ ಆರ್ಹರಾಗುವಂತೆ ಬೆಳೆದಿದ್ದಾರೆ. ಆದರೆ, ನಿಮ್ಮಲ್ಲಿ ಸಿಎಂ ಆಗುವುದಿರಲಿ, ಕನಿಷ್ಠ ಸಿಎಂ ರೇಸ್‍ನಲ್ಲಿ ಬರುವಂತೆ ಒಬ್ಬೇ ಒಬ್ಬ ದಲಿತರನ್ನು ಬೆಳೆಸಲಿಲ್ಲವಲ್ಲ' ಎಂದು ಕಾಂಗ್ರೆಸ್, ಬಿಜೆಪಿಯನ್ನು ಖಾರವಾಗಿ ಪ್ರಶ್ನಿಸಿದೆ. 

`ಮೊದಲ ನೆರೆಗೆ-ಸಂಪುಟವೇ ಇರಲಿಲ್ಲ, ಎರಡನೇ ನೆರೆಗೆ-ಆಂತರಿಕ ಕಿತ್ತಾಟ ಮುಗಿದಿರಲಿಲ್ಲ, ಕೊರೋನ 1ನೆ ಅಲೆಯಲ್ಲಿ- ಖಾತೆ ಹಂಚಿಕೆ ಸರ್ಕಸ್, 2ನೆ ಅಲೆಯಲ್ಲಿ-ಸಿಡಿ ರಂಪಾಟ, ಇದೀಗ ಕೊರೋನ 3ನೆ ಅಲೆಗೆ ಸಿದ್ಧತೆ ಬಿಟ್ಟು ನಾಯಕತ್ವ ಕಿತ್ತಾಟ.
ರಾಜ್ಯ ಬಿಜೆಪಿ ಸರಕಾರ ಒಂದು ದಿನವೂ ಪ್ರಾಮಾಣಿಕವಾಗಿ ಜನಹಿತದ ಕೆಲಸ ಮಾಡಲೇ ಇಲ್ಲ' ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News