ಚಾಮರಾಜನಗರ ಆಕ್ಸಿಜನ್ ದುರಂತ: ನ್ಯಾಯ ಸಿಗದಿದ್ದರೆ ಆತ್ಮಹತ್ಯೆ; ಸಂತ್ರಸ್ತ ಕುಟುಂಬದಿಂದ ಎಚ್ಚರಿಕೆ

Update: 2021-07-23 18:30 GMT

ಚಾಮರಾಜನಗರ, ಜು.23: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 2ರ ರಾತ್ರಿ ನಡೆದ ಆಕ್ಸಿಜನ್ ದುರಂತಕ್ಕೆ ಜಿಲ್ಲಾಡಳಿತವೇ ನೇರ ಕಾರಣ. ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳ ಕರ್ತವ್ಯ ಲೋಪದಿಂದಾಗಿ ದುರಂತ ಸಂಭವಿಸಿದೆ. ಈ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹಾಗೂ ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ಸಿಗಬೇಕು ಇಲ್ಲದಿದ್ದರೆ ಇಡೀ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ಥೆ ಕುಟುಂಬಸ್ಥರು ಸರಕಾರಕ್ಕೆ ಎಚ್ಚರಿಸಿದ್ದಾರೆ.

ತಾಲೂಕಿನ ಮಂಗಲಹೊಸೂರು ಗ್ರಾಮದ ದೊಡ್ಡಯ್ಯ ಎಂಬವರು ಕೊರೋನ ಪಾಸಿಟಿವ್ ಹಿನ್ನೆಲೆ ಎ.26ರಂದು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಆರೋಗ್ಯವಾಗಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮೇ 2ರ ಆಕ್ಸಿಜನ್ ದುರಂತದಲ್ಲಿ ದೊಡ್ಡಯ್ಯ ಸಾವನ್ನಪ್ಪಿದರು.

ದೊಡ್ಡಯ್ಯ ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಎಂಟುಮಂದಿಯ ತುಂಬಿದ ಕುಟುಂಬ. ಈ ಕುಟುಂಬ ಇದೀಗ ಮನೆಯ ಯಜಮಾನನಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದ್ದು, ದೊಡ್ಡಯ್ಯರವರ ಪತ್ನಿ ಸೌಮ್ಯ ನಮಗೆ ಸರಕಾರದಿಂದ ನ್ಯಾಯ ಸಿಗದಿದ್ದರೆ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಮೇ 2ರ ರಾತ್ರಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 36 ಮಂದಿ ಮೃತಪಟ್ಟರೂ, ಆದರೂ ಈ ಬಗ್ಗೆ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡದೇ ನಿರ್ಲಕ್ಷತನ ತೋರಿದೆ ಎನ್ನುವ ಅಂಶ ಲೋಕಸಭೆ ಅಧಿವೇಶನದಲ್ಲಿ ನೀಡಿದ ಮಾಹಿತಿಯಿಂದ ಬಯಲಿಗೆ ಬಂದಿದೆ. ದೇಶದಲ್ಲಿ ಯಾವುದೇ ಆಕ್ಸಿಜನ್ ದುರಂತ ಪ್ರಕರಣಗಳು ನಡೆದಿರುವ ಬಗ್ಗೆ ಆಯಾ ರಾಜ್ಯ ಸರಕಾರಗಳು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವರು ಸದನದಲ್ಲಿ ಮಾಹಿತಿ ಒದಗಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಕರ್ನಾಟಕ ರಾಜ್ಯ ಸರಕಾರದ ನಿರ್ಲಕ್ಷ ತೋರಿರುವುದು ಬಹಿರಂಗವಾಗಿದೆ.

ದುರಂತದ ಬಗ್ಗೆ ಹೈ ಕೋರ್ಟ್ ಮಧ್ಯ ಪ್ರವೇಶ ಮಾಡಿ ರಾಜ್ಯ ಸರಕಾರದ ಬೊಕ್ಕಸದಿಂದ 24 ಮಂದಿಯ ಕುಟುಂಬಕ್ಕೆ ತಲಾ 2 ಲಕ್ಷ ರೂ. ತಾತ್ಕಾಲಿಕ ಪರಿಹಾರವನ್ನು ಕೊಡಿಸಿದೆ. ಜನ ಪ್ರತಿನಿಧಿಗಳ ನಿರಾಸಕ್ತಿಯಿಂದ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿರುವ ಆಕ್ಸಿಜನ್ ದುರಂತ ಪ್ರಕರಣ ಹಳ್ಳ ಹಿಡಿಯುವ ಮುನ್ನ ಎಚ್ಚೆತ್ತುಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ಹಾಗೂ ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ಸಿಗುವಂತಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಮೇ 2ರಂದು ಸಂಭವಿಸಿದ ಆಕ್ಸಿಜನ್ ದುರಂತ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರಕ್ಕೆ ರಾಜ್ಯ ಸರಕಾರವು ಯತ್ನಿಸಿರುವುದಕ್ಕೆ ಚಾಮರಾಜನಗರದಲ್ಲಿ ನಡೆದಿರುವ ಆಕ್ಸಿಜನ್ ದುರಂತದ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡದೇ ಇರುವುದು ಸಾಕ್ಷಿ.

ಮಹೇಶ್, ಎಸ್‌ಡಿಪಿಐ ನಗರಸಭಾ ಸದಸ್ಯ

ನನ್ನ ಪತಿ ದೊಡ್ಡಯ್ಯರನ್ನು ಕೋವಿಡ್ ಸೋಂಕಿನ ಹಿನ್ನೆಲೆ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸೇರಿಸಿದೆವು. ವೈದ್ಯರು ಚಿಕಿತ್ಸೆ ನೀಡಿ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದ್ದರು. ಆದರೆ ಮೇ 2ರಂದು ರಾತ್ರಿ ನಿಮ್ಮವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯಿಂದ ಪೋನ್ ಬಂತು. ಗಾಬರಿಯಿಂದ ಆಸ್ಪತ್ರೆಗೆ ಹೋಗಿ ನೋಡಿದರೆ ಹೆಣಗಳ ರಾಶಿಯೇ ಇತ್ತು. ಇನ್ನೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿಲ್ಲ. ಸರಕಾರವು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳಲಿದೆ.

ಸೌಮ್ಯಾ, ಮೃತ ದೊಡ್ಡಯ್ಯರವರ ಪತ್ನಿ, ಮಂಗಲ ಹೊಸೂರು

 ಮೇ 2 ರ ರಾತ್ರಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿರುವ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ವರದಿ ನೀಡದೇ ಇರುವುದು ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ದುರಂತ ನಡೆದ ವೇಳೆಯಲ್ಲಿ ಇದ್ದ ತಪ್ಪಿತಸ್ಥರನ್ನು ರಕ್ಷಿಸಲು ಸರಕಾರ ವ್ಯವಸ್ಥಿತವಾಗಿ ಯೋಜನೆ ರೂಪಿಸುತ್ತಿದೆ.

ರಾಜಶೇಖರ್, ಮಂಗಲ ಹೊಸೂರು

Writer - ನಾ ಅಶ್ವಥ್ ಕುಮಾರ್

contributor

Editor - ನಾ ಅಶ್ವಥ್ ಕುಮಾರ್

contributor

Similar News