ಜು. 25ರಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಗೆ ಅವಕಾಶ : ರಾಜ್ಯ ಸರಕಾರ
ಮಂಗಳೂರು, ಜು.24: ಕೋವಿಡ್ ಎರಡನೆ ಅಲೆಯ ಅನ್ ಲಾಕ್ ಬಳಿಕ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದರೂ ಸೇವೆಗಳಿಗೆ ನಿರ್ಬಂಧವಿತ್ತು. ಇದೀಗ ರಾಜ್ಯ ಸರಕಾರ ಆ ನಿರ್ಬಂಧ ವನ್ನು ತೆರವುಗೊಳಿಸಿದ್ದು, ಜು. 25ರಿಂದ ರಾಜ್ಯದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸೇವೆಗಳನ್ನು ಆರಂಭಿಸಲು ಅವಕಾಶ ಕಲ್ಪಿಸಿದೆ.
ಈ ಬಗ್ಗೆ ರಾಜ್ಯ ಸರಕಾರದ ಕಾರ್ಯಾಲಯದಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಸದ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಜಾತ್ರೆ, ದೇವಸ್ಥಾನಗಳ ಉತ್ಸವ, ಮೆರವಣಿಗೆ, ಸಭೆಗಳಿಗೆ ಅವಕಾಶವಿಲ್ಲ ಎಂದು ರಾಜ್ಯ ಸರಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ದೇವಳಗಳಲ್ಲಿ ಸೇವೆಯನ್ನು ಆರಂಭಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಜು. 25ರಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜಾದಿ ಸೇವೆ ಹಾಗೂ ಪ್ರಸಾದ ವಿತರಣೆಗೆ ಅವಕಾಶ ಕಲ್ಪಿಸಲು ಆದೇಶಿಸಿದ್ದಾರೆ ಎಂದು ಮುಜರಾಯಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಟ್ವೀಟ್ ಮಾಡಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ.