ಜು.25 ರಂದು ಮಳೆ ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ, ಪರಿಶೀಲನೆ

Update: 2021-07-24 12:23 GMT

ಬೆಂಗಳೂರು, ಜು. 24: 'ನೆರೆಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ರಾಜ್ಯದ ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆ ನಾಳೆ(ಜು.25) ಬೆಳಗಾವಿ ಸೇರಿದಂತೆ ಕೆಲ ಜಿಲ್ಲೆಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಶನಿವಾರ ಬೆಳಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕರೆ ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮಳೆ, ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದರು. ಅತಿ ಹೆಚ್ಚು ಮಳೆ ಬೀಳುತ್ತಿರುವ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿನ ಉಸ್ತುವಾರಿ ಸಚಿವರಿಗೆ ಜಿಲ್ಲೆಯಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ.

ನಾಳೆ ಬೆಳಗ್ಗೆ 9 ಗಂಟೆಗೆ ಇಲ್ಲಿನ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಬೆಳಗಾವಿಯ ಸಾಂಬ್ರಾ ವಿಮಾನಕ್ಕೆ ತೆರಳಲಿದ್ದು, ಅಲ್ಲಿಂದ ನೇರವಾಗಿ ಪ್ರವಾಹ ಮತ್ತು ಮಳೆ ಹಾನಿ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ವೀಕ್ಷಣೆ ಮಾಡಲಿದ್ದು, ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ, ಸಾಂತ್ವನ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಆ ಬಳಿಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದು, ಸಮರೋಪಾದಿ ಪರಿಹಾರ ಕಾರ್ಯಗಳಿಗೆ ಸೂಚನೆ ನೀಡಲಿದ್ದಾರೆ.

ರಾಜ್ಯ ಸರಕಾರ ಪರಿಹಾರ ಕಾರ್ಯಕ್ಕೆ ಎಲ್ಲ ರೀತಿಯ ನೆರವು ನೀಡಲಿದ್ದು, ಕಾಳಜಿ ಕೇಂದ್ರ ತೆರೆದು ಜನ ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿ ಅವಲೋಕಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ಯಡಿಯೂರಪ್ಪ ಇದೇ ವೇಳೆ ತಾಕೀತು ಮಾಡಿದರು.

ಪ್ರವಾಹ ಇಳಿಮುಖವಾಗುವವರೆಗೂ ಜಿಲ್ಲೆಯಲ್ಲೇ ಇರಬೇಕು. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಸ್ಥಳೀಯ ಪೊಲೀಸ್ ಸಿಬ್ಬಂದಿ ಸೇರಿದಂತೆ ಮತ್ತಿತರ ಜೊತೆ ಸಂತ್ರಸ್ತರಾದವರನ್ನು ರಕ್ಷಣೆ ಮಾಡಬೇಕೆಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಜಾಗ ಬಿಟ್ಟು ಕದಲಬಾರದು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಸತಿ ಶಾಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ ಮಾಡಿದ್ದಾರೆ.

`ಇದೀಗ ಮತ್ತೆ ರಾಜ್ಯದ ಕೆಲವೆಡೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ನಿನ್ನೆಯಷ್ಟೆ ಬೆಳಗಾವಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಸೇರಿದಂತೆ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ, ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆ, ಪರಿಹಾರ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದೇನೆ. ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ನಾನೇ ನಾಳೆ(ಜು.25) ಬೆಳಗಾವಿಗೆ ತೆರಳಲಿದ್ದೇನೆ. ಅತಿವೃಷ್ಟಿ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಕರೆ ಮಾಡಿ ಭಾರಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿಯೇ ಇರುವಂತೆ ಸೂಚನೆ ನೀಡಿದ್ದೇನೆ'
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News