ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಮಿಕರ ಕಿಟ್ ಅಕ್ರಮ ಸಂಗ್ರಹ ಆರೋಪ: ಯುವ ಕಾಂಗ್ರೆಸ್ ಪ್ರತಿಭಟನೆ

Update: 2021-07-24 12:34 GMT

ಶಿವಮೊಗ್ಗ : ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಬಡ ಕಾರ್ಮಿಕರಿಗೆ ನೀಡಬೇಕಾಗಿದ್ದ ದಿನಸಿ ಕಿಟ್ ಗಳನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಅಶೋಕ ನಾಯ್ಕ್ ಅವರು ತಮ್ಮ ಒಡೆತನದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ  ಅಕ್ರಮವಾಗಿ ಸಂಗ್ರಹಿಸಿ ತಮಗೆ ಬೇಕಾದ ಬೆಂಬಲಿಗರಿಗೆ ನೀಡುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ.

ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ದಿನಸಿ ಕಿಟ್ ಗಳನ್ನು ಜಿಲ್ಲೆಯಾದ್ಯಂತ ನೀಡಲಾಗುತ್ತಿದೆ. ಆದರೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ದಿನಸಿ ಕಿಟ್ ಶಾಸಕ ಕೆ.ಬಿ. ಆಶೋಕ್ ನಾಯ್ಕ್ ಒಡೆತನದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ  ಅಕ್ರಮವಾಗಿ ಇಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ.

ಪ್ರಕರಣ ಬಯಲು ಮಾಡಿದ ಯುವ ಕಾಂಗ್ರೆಸ್ 

ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿ ಹಂಚ ಬೇಕಾಗಿದ್ದ ದಿನಸಿ ಕಿಟ್‌ಗಳನ್ನು ಶಾಸಕ ಕಾಲೇಜಿನಲ್ಲಿ ಇಟ್ಟಿದ್ದಾರೆ ಎಂಬ ಮಾಹಿತಿ ಮೇರೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ತಂಡ ಪತ್ತೆ ಹಚ್ಚಿ ಪ್ರಕರಣವನ್ನು ಬೆಳಕಿಗೆ ತಂದಿದೆ.

ಸರ್ಕಾರ ಕಟ್ಟಡ ಕಾರ್ಮಿಕರಿಗೆ ವಿತರಿಸಲು ದಿನಸಿ ಕಿಟ್ ನೀಡಿದೆ. ಈಗಾಗಲೇ ಹಲವು ಭಾಗಗಳಲ್ಲಿ ಹಂಚಿಕೆ ಮಾಡಲಾಗಿದೆ. ಆದರೆ ಸುಮಾರು 2 ಸಾವಿರಕ್ಕೂ ಅಧಿಕ ಕಿಟ್‌ಗಳನ್ನು ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ ಆಶೋಕ್ ನಾಯ್ಕ್ ಒಡೆತನದ ಖಾಸಗಿ  ಶಿಕ್ಷಣ ಸಂಸ್ಥೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂದು ಆರೋಪಿಸಿದರು. ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.

ಈ ಸಂದರ್ಭ ಯುವ ಕಾಂಗ್ರೆಸ್ ಮುಖಂಡ ಸಿ.ಜಿ ಮಧುಸೂದನ್, ಕೆ.ಚೇತನ್, ಕೆ.ರಂಗನಾಥ್,ಎಚ್.ಪಿ ಗಿರೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News