ಚಿಕ್ಕಮಗಳೂರು: ಅಲ್ಲಲ್ಲಿ ಧಾರಾಕಾರ ಮಳೆ; ಮನೆ, ಧರೆ ಕುಸಿತ

Update: 2021-07-24 13:43 GMT

ಚಿಕ್ಕಮಗಳೂರು, ಜು.24: ಕಾಫಿನಾಡಿನಲ್ಲಿ ಶುಕ್ರವಾರ ಧಾರಾಕಾರವಾಗಿ ಸುರಿದ ಮಳೆ ಶನಿವಾರ ಕೊಂಚ ಬಿಡುವು ನೀಡಿದೆಯಾದರೂ ಜಿಲ್ಲಾದ್ಯಂತ ಸಾಧಾರಣ ಮಳೆ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಅಲ್ಲಲ್ಲಿ ಮನೆ, ಭೂಕುಸಿತ, ಸಂಪರ್ಕ ಕಡಿತದಂತಹ ಪ್ರಾಕೃತಿಕ ಅವಘಡಗಳು ಸಂಭವಿಸುತ್ತಿವೆ. 

ಗುರುವಾರ ಹಾಗೂ ಶುಕ್ರವಾರ ನಿರಂತರ ಮಳೆಯಿಂದಾಗಿ ಮಲೆನಾಡಿನ ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲಿ ಹರಿದ ಪರಿಣಾಮ ಅಲ್ಲಲ್ಲಿ ನದಿಗಳ ನೀರು ಹೊಲ ಗದ್ದೆಗಳಿಗೆ ಹರಿದು ಜಲಾವೃತಗೊಂಡಿದ್ದವು. ಭೂಕುಸಿತ ಹಾಗೂ ನೆರೆ ನೀರು ರಸ್ತೆ ಮೇಲೆ ನಿಂತ ಪರಿಣಾಮ ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿತ್ತು. 

ಶನಿವಾರ ಮುಂಜಾನೆಯಿಂದ ಬೆಳಗ್ಗೆ 11ರವರೆಗೆ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ನಂತರ ಮಧ್ಯಾಹ್ನದವರೆಗೆ ಮಳೆ ಬಿಡುವು ನೀಡಿತ್ತು. ಮಧ್ಯಾಹ್ನದ ಬಳಿಕ ಮಲೆನಾಡಿನಾದ್ಯಂತ ಮಳೆ ಮತ್ತೆ ಬಿರುಸುಗೊಂಡಿದೆ. ಜಿಲ್ಲೆಯ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಚಿಕ್ಕಮಗಳೂರು ತಾಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ಸಾಧಾರಣ ಮಳೆಯಾಗಿದ್ದು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ.

ಶನಿವಾರ ಮುಂಜಾನೆ ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಊರುಬಗೆ-ಯು ಹೊಸಳ್ಳಿ ಸಂಪರ್ಕ ರಸ್ತೆ ಜಲಾವೃತಗೊಂಡಿದ್ದು, ಸಮೀಪದ ನಾಟಿ ಮಾಡಿದ್ದ ಭತ್ತದ ಗದ್ದೆಗಳೂ ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಪರಿಣಾಮ ಭತ್ತದ ಗದ್ದೆಗಳ ಕೃಷಿಕರಿಗೆ ಭಾರೀ ನಷ್ಟ ಸಂಭವಿಸಿದೆ. ತಾಲೂಕಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಕಿರುಗುಂದ, ಗೋಣಿಬೀಡು ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಹಾಗೂ ಸಂಜೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯಲ್ಲೂ ಶನಿವಾರ ಇಡೀ ದಿನ ಸಾಧಾರಣ ಮಳೆಯಾಗಿದ್ದು, ಕಳಸ ಪಟ್ಟಣ ಸಮೀಪದಲ್ಲಿ ಹರಿಯುವ ಭದ್ರಾ ನದಿಯಲ್ಲಿ ನೀರಿನ ಹರಿವು ಕೊಂಚ ಕಡಿಮೆಯಾಗಿದ್ದು, ಶುಕ್ರವಾರ ಭದ್ರನದಿ ನೀರಿನಲ್ಲಿ ಮುಳುಗಡೆಯಾಗಿದ್ದ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಶನಿವಾರ ಸಂಚಾರಕ್ಕೆ ಮುಕ್ತವಾಗಿದೆ. ತಾಲೂಕಿನಾದ್ಯಂತ ಸಂಜೆಯಿಂದ ಮಳೆ ಬಿರುಸುಗೊಂಡಿದ್ದು, ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ.

ಚಿಕ್ಕಮಗಳೂರು ತಾಲೂಕಿನ ವಸ್ತಾರೆ, ಮಲ್ಲಂದೂರು, ಆಣೂರು ಮತ್ತಿತರ ಮಲೆನಾಡು ಭಾಗದ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಮುಂಜಾನೆ ಧಾರಾಕಾರ ಮಳೆ ಸುರಿದಿದೆ. ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಮಳೆ, ಗಾಳಿಗೆ ಜಯರಾಮ್ ಎಂಬವರ ಮನೆ ಕುಸಿದು ಬಿದ್ದಿದೆ. ಜಯರಾಮ್  ಕುಟುಂಬ ಅಪಾಯದಿಂದ ಪಾರಾಗಿದ್ದಾರೆ. ಕಂದಾಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ ಸಂಜೆ ಸಾಧಾರಣ ಮಳೆಯಾಗಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣವಿತ್ತು. ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಉಳಿದಂತೆ ಮೋಡಕವಿದ ವಾತಾವರಣವಿತ್ತು.

ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಭಾಗದಲ್ಲಿ ಶನಿವಾರ ಸಾಧಾರಣ ಮಳೆಯಾಗಿದ್ದು, ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಹರಿಯುವ ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೆಲ ಗ್ರಾಮಗಳ ವ್ಯಾಪ್ತಿಯಲ್ಲಿ ನದಿಗಳ ನೆರೆ ನೀರು ಅಕ್ಕಪಕ್ಕದ ಭತ್ತದ ಗದ್ದೆ, ಕಾಫಿ, ಅಡಿಕೆ ತೋಟಗಳಿಗೆ ನುಗ್ಗಿದ್ದು, ಅಪಾರ ಹಾನಿ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News