×
Ad

ಮುಳುಗಡೆ ಆತಂಕದಲ್ಲಿರುವವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಿ: ಶಾಸಕ ಅಪ್ಪಚ್ಚು ರಂಜನ್ ಮನವಿ

Update: 2021-07-24 20:46 IST

ಮಡಿಕೇರಿ: ಮಡಿಕೇರಿ ಮತ್ತು ಸೋಮವಾರಪೇಟೆ ವ್ಯಾಪ್ತಿಯ ಹಾರಂಗಿ ಜಲಾಶಯದ ನೀರಿನ ಮೂಲಗಳಾದ ಹಟ್ಟಿಹೊಳೆ, ಮಾದಾಪುರ ಹೊಳೆ ಉಕ್ಕಿ ಹರಿಯುತ್ತಿದ್ದು, ಹಾರಂಗಿ ಜಲಾಶಯಕ್ಕೆ 14,851 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 

2859 ಅಡಿ ನೀರಿನ ಸಂಗ್ರಹಾ ಸಾಮಥ್ರ್ಯದ ಜಲಾಶಯದಲ್ಲಿ ಪ್ರಸ್ತುತ 2854.37 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಜಲಾಶಯದಲ್ಲಿ ಗರಿಷ್ಟ ನೀರಿನ ಪ್ರಮಾಣವನ್ನು ಕಾಯ್ದುಕೊಂಡು ನದಿಗೆ 15,206 ಹಾಗೂ ನಾಲೆಗೆ 40 ಕ್ಯೂಸೆಕ್ ಸೇರಿದಂತೆ ಒಟ್ಟು 15,246 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಶನಿವಾರ ಬೆಳಗೆ 6ಗಂಟೆಗೆ ಕೊನೆ ಗೊಂಡಂತೆ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ 23.4 ಮಿ.ಮೀ ಮಳೆಯಾಗಿದೆ.

ಕೂಡಿಗೆ ಬಳಿ ಕಾವೇರಿ ನದಿ ಮತ್ತು ಹಾರಂಗಿ ಜಲಾಶಯದಿಂದ ಹೊರ ಹರಿವಿನ ನೀರು ಸಂಗಮವಾಗಿ ಕುಶಾಲನಗರದ ಕೆಲವು ಬಡಾವಣೆಗಳಿಗೆ ಪ್ರವಾಹ ಪರಿಸ್ಥಿತಿ ತಲೆದೋರುವ ಆತಂಕ ಎದುರಾಗಿದೆ. ಶನಿವಾರ ಶಾಸಕ ಅಪ್ಪಚ್ಚು ರಂಜನ್ ಗುಡ್ಡೆಹೊಸುರು ತೆಪ್ಪದಕಂಡಿ, ಕುಶಾಲನಗರದ ಕುವೆಂಪು ಬಡಾವಣೆ, ಸಾಯಿ ಲೇಔಟ್‍ಗೆ ತೆರಳಿ ಪರಿಶೀಲನೆ ನಡೆಸಿದರು. 

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಮುಳುಗಡೆ ಆತಂಕವನ್ನು ಎದುರಿಸುತ್ತಿರುವ ಕುಶಾಲನಗರದ ವಿವಿಧ ಬಡಾವಣೆಗಳ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮನವಿ ಮಾಡಿದರು.

ಈ ಭಾಗದ ನದಿಗಳು ತುಂಬಿ ಹರಿಯುತ್ತಿವೆ,  ಮುಂದಿನ ದಿನಗಳಲ್ಲಿ ಹೀಗೆ ಮಳೆ ಮುಂದುವರೆದರೆ ಕೆಲವು ಬಡಾವಣೆಗಳು ಜಲಾವೃತಗೊಳ್ಳಬಹುದು. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ತಿಳಿಸಿದರು. 
ಗ್ರಾ.ಪಂ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರುಗಳು ಈ ಸಂದರ್ಭ ಹಾಜರಿದ್ದು, ಮಳೆಹಾನಿ ಸಮಸ್ಯೆಗಳ ಬಗ್ಗೆ ವಿವರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News