ಮಳೆ, ಪ್ರವಾಹದಿಂದಾಗಿ ರಾಜ್ಯದಲ್ಲಿ 9 ಮಂದಿ ಮೃತ್ಯು: ರಾಜ್ಯ ಸರಕಾರ ಮಾಹಿತಿ

Update: 2021-07-24 15:36 GMT

ಬೆಂಗಳೂರು: ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ರಾಜ್ಯದಲ್ಲಿ ಇದುವರೆಗೆ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರಕಾರ ಮಾಹಿತಿ ನೀಡಿದೆ.

ರಾಜ್ಯದ 11 ಜಿಲ್ಲೆಗಳ 45 ತಾಲೂಕುಗಳಲ್ಲಿ ಮಳೆಯಿಂದ ಸಂಕಷ್ಟ ಸ್ಥಿತಿ ಎದುರಾಗಿದ್ದು, ಸುಮಾರು 283 ಗ್ರಾಮಗಳಿಗೆ ಮಳೆಯಿಂದ ಭಾರೀ ಹಾನಿಯಾಗಿದೆ ಎಂದು ತಿಳಿಸಲಾಗಿದೆ.

ರಾಜ್ಯದ 36,498 ಜನರಿಗೆ ಪ್ರವಾಹದಿಂದಾಗಿ ತೊಂದರೆ ಆಗಿದ್ದು, ಇದುವರೆಗೆ 3 ಜನರು ಪ್ರವಾಹದಿಂದ ಕಾಣೆಯಾಗಿರುವ ಬಗ್ಗೆ ವರದಿಯಾಗುದೆ. ರಾಜ್ಯದ 134 ಮನೆಗಳು ಸಂಪೂರ್ಣ ಹಾನಿಯಾಗಿದೆ. 2,480 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 54  ಜಾನುವಾರುಗಳು ಸಾವನ್ನಪ್ಪಿದ್ದು, ಇದುವರೆಗೆ 31,360 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

237 ಕಡೆಗಳಲ್ಲಿ ಕಾಳಜಿ ಕೇಂದ್ರಗಳ ಆರಂಭ ಮಾಡಿದ್ದು, ಕಾಳಜಿ ಕೇಂದ್ರಗಳಲ್ಲಿ 22,417 ಜನರಿಗೆ ಪರಿಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಹದಿಂದಾಗಿ ರಾಜ್ಯದಲ್ಲಿ 58,960 ಎಕರೆಯಲ್ಲಿ ಬೆಳೆದ ಬೆಳೆ ಹಾನಿಯಾಗಿದ್ದು, 1,962 ಎಕರೆಯಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಮಳೆ ಮತ್ತು ಪ್ರವಾಹದಿಂದ ಸುಮಾರು 555 ಕಿ.ಮೀ ರಸ್ತೆ ಹಾನಿಯಾಗಿದೆ.

ರಾಜ್ಯದ ವಿವಿಧೆಡೆ 123 ಸೇತುವೆಗಳಿಗೆ ಹಾನಿಯಾಗಿದ್ದು, 213 ಶಾಲೆಗಳು, 33 ಆರೋಗ್ಯ ಕೇಂದ್ರಗಳಿಗೆ ಹಾಗೂ 3,502 ವಿದ್ಯುತ್ ಕಂಬಗಳು ನೆಲಕ್ಕುರಿಳಿದ್ದರೆ, 341 ವಿದ್ಯುತ್ ಟ್ರಾನ್ಸ್ ಫರ್ಮರ್ ಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News