ಕೊಡಗಿನಲ್ಲಿ ತಗ್ಗಿದ ಮಳೆ: ವಿವಿಧೆಡೆ ಹಾನಿ

Update: 2021-07-24 15:55 GMT

ಮಡಿಕೇರಿ: ಕಳೆದ ಒಂದು ವಾರದಿಂದ ಮಹಾಮಳೆಯ ಹೊಡೆತಕ್ಕೆ ಸಿಲುಕಿ ಆತಂಕದಲ್ಲಿದ್ದ ಕೊಡಗು ಜಿಲ್ಲೆ ಈಗ ಶಾಂತವಾಗಿದೆ. ಶನಿವಾರ ಮಳೆ ಮತ್ತು ಗಾಳಿಯ ರಭಸ ಕಡಿಮೆಯಾಗಿದೆ.

ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ತುಂಬಿ ಹರಿಯುತ್ತಿರುವ ನದಿ ನೀರಿನ ಮಟ್ಟ ತಗ್ಗಿಲ್ಲ. ಭಾಗಮಂಡಲ- ಮಡಿಕೇರಿ- ನಾಪೋಕ್ಲು ರಸ್ತೆಯನ್ನು ಆವರಿಸಿದ್ದ ತ್ರಿವೇಣಿ ಸಂಗಮದ ನೀರು ತಗ್ಗಿದೆ. ಜಿಲ್ಲೆಯ ವಿವಿಧೆಡೆ ಬರೆಗಳು ಕುಸಿದಿದ್ದು, ಮನೆಗಳಿಗೂ ಹಾನಿಯಾಗಿದೆ. ಗ್ರಾಮೀಣ ಭಾಗದಲ್ಲಿ ಗದ್ದೆ ಹಾಗೂ ತೋಟಗಳು ಜಲಾವೃತಗೊಂಡಿವೆ. ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ. ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಮಾದಾಪುರ ಮಡಿಕೇರಿ ಮುಖ್ಯ ರಸ್ತೆಯಲ್ಲಿ ಹಟ್ಟಿಹೊಳೆ ಬಳಿ ಬಿರುಕು ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಶಾಸಕ  ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸಂಬಂಧಿಸಿದ ಇಂಜಿನಿಯರ್ ವಿಜಯಕುಮಾರ್ ಅವರೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.  

ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯಲ್ಲಿ ಹಾನಿ ಸಂಭವಿಸುತ್ತಿದ್ದು, ಬರೆ ಮತ್ತು ಮನೆಯೊಂದರ ಗೋಡೆ ಕುಸಿದ ಘಟನೆ ನಡೆದಿದೆ.

ಹೆಬ್ಬೆಟ್ಟಗೇರಿ ಗ್ರಾಮದ ಪಾಂಡೀರ ಕಾವೇರಮ್ಮ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದು ಸಾಕಷ್ಟು ಹಾನಿ ಸಂಭವಿಸಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ಕೆ.ನಿಡುಗಣೆ ಗ್ರಾ.ಪಂ ಅಧ್ಯಕ್ಷ ಕೆ.ಕೆ.ಅಯ್ಯಪ್ಪ, ತಹಶೀಲ್ದಾರ್ ಮಹೇಶ್ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
 ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ನವಗ್ರಾಮದಲ್ಲಿ ಮಳೆಗೆ ಮನೆಗೋಡೆ ಕುಸಿದ ಘಟನೆ ನಡೆದಿದೆ. ನವಗ್ರಾಮದ ಧರ್ಮಾವತಿ ಮುತ್ತಣ್ಣ ಅವರ ಮನೆಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮಳೆ ನೀರು ಬಿದ್ದು, ಮನೆಯ ಹಿಂಭಾಗದಲ್ಲಿರುವ ಗೋಡೆ ನೆಲಕ್ಕುರುಳಿದೆ.  ನಿರಂತರ ಮಳೆಯಿಂದ ಬೇರೆ ಗೋಡೆಗಳು ಕೂಡ ಬೀಳುವ ಸ್ಥಿತಿಯಲ್ಲಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಧರ್ಮಾವತಿ ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಭೇಟಿ ನೀಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮತ್ತು ಕುಶಾಲನಗರ ಕಂದಾಯ ಪರಿವೀಕ್ಷಕರಿಗೆ ಮಾಹಿತಿ ನೀಡಿದರು. ಸರ್ಕಾರದಿಂದ ಸಿಗುವ ಪರಿಹಾರವನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು. ನಂತರ ಸ್ಥಳಕ್ಕಾಗಮಿಸಿದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಗುರುದರ್ಶನ್, ಪರಿಶೀಲನೆ ನಡೆಸಿದರು ಈ ಸಂದರ್ಭ ಕಂದಾಯ ಇಲಾಖೆಯ ಸಿಬ್ಬಂದಿ ಲೋಕೇಶ್ ಹಾಗೂ ಗ್ರಾಮಸ್ಥರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News