ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಕೋರಿ ಮನವಿ

Update: 2021-07-24 16:16 GMT

ಬೆಂಗಳೂರು, ಜು.24: ರಾಜ್ಯದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಕಡಿಮೆ ಆಗಿರುವುದರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಬೇಕು. ಹಾಗೆಯೇ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಕೊಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿದೆ.

ಶನಿವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಯೋಗ, ಕೋವಿಡ್ ಲಾಕ್‍ಡೌನ್‍ನಿಂದಾಗಿ ಚಿತ್ರರಂಗದ ಭವಿಷ್ಯ ಕರಾಳವಾಗಿದೆ. ಈಗಿರುವ ಸರಕಾರದ ಆದೇಶದಂತೆ ಶೇ.50ರಷ್ಟು ಸೀಟು ಭರ್ತಿಯೊಂದಿಗೆ ಥಿಯೇಟರ್ ತೆರೆದು ಚಿತ್ರ ಪ್ರದರ್ಶನ ನಡೆಸಿದರೆ ಟಾಕೀಸ್ ನಿರ್ವಹಣೆಯ ಖರ್ಚು ಕೂಡ ಬರುವುದು ಕಷ್ಟಕರವಾಗಲಿದೆ. ಹೀಗಾಗಿ ಶೇ.100ರಷ್ಟು ಸೀಟುಗಳ ಭರ್ತಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ಸಿನೆಮಾ ಮಂದಿರಗಳಲ್ಲಿ ಶೇ.50ರಷ್ಟು ಸೀಟಿಗೆ ಮಾತ್ರ ಅವಕಾಶ ಕಲ್ಪಿಸಿದರೆ ಥೇಟರ್‍ಗಳಿಗೆ ಬರುವವರು ಬರುವುದಿಲ್ಲ. ಶೇ.100ಸೀಟಿಗೆ ಅವಕಾಶ ಕಲ್ಪಿಸಿದರೆ ಶೇ.50ರಷ್ಟು ಮಂದಿಯಾದರು ಬರುತ್ತಾರೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ಎನ್.ಎಂ. ಸುರೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News