19 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ: ಬೆಳಗಾವಿ ಜಿಲ್ಲಾಧಿಕಾರಿ ಹೀರೇಮಠ್

Update: 2021-07-24 17:15 GMT

ಬೆಳಗಾವಿ, ಜು. 24: `ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಜಲಾವೃತಗೊಂಡಿರುವ ನದಿ ತೀರದ ಗ್ರಾಮಗಳಲ್ಲಿನ ಒಟ್ಟು 19,035 ಜನರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ' ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಜಿಲ್ಲೆಯಲ್ಲಿ ಸದ್ಯಕ್ಕೆ 89 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಆ ಕೇಂದ್ರಗಳಲ್ಲಿ ಒಟ್ಟು 8,795 ಜನರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ. ಅತಿವೃಷ್ಟಿಯಿಂದ ಈವರೆಗೆ ಎರಡು ಸಾವು ಸಂಭವಿಸಿದೆ. 37 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ' ಎಂದು ಮಾಹಿತಿ ನೀಡಿದರು.

`ಮಳೆಯ ಪ್ರಮಾಣ ಜಿಲ್ಲೆಯಲ್ಲಿ ಕೊಂಚ ಕಡಿಮೆಯಾಗಿದೆ. ಸದ್ಯಕ್ಕೆ ಯಾವುದೇ ರೀತಿಯ ತೊಂದರೆಗಳಿಲ್ಲ. ಎಲ್ಲ ತಾಲೂಕುಗಳಲ್ಲಿ ನೋಡಲ್ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಹಾಗೂ ಮಳೆಯ ಪ್ರಮಾಣದ ಬಗ್ಗೆ ನಿರಂತರ ನಿಗಾ ವಹಿಸಿದ್ದಾರೆ. ಜನರು ಆತಂಕಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಜನರ ಸುರಕ್ಷತೆಗೆ ಆಸ್ಥೆ ವಹಿಸಿದೆ' ಎಂದು ಅವರು ಇದೇ ವೇಳೆ ತಿಳಿಸಿದರು.

`ಒಂದು ವೇಳೆ ಏನಾದರೂ ತೊಂದರೆಗಳು ಕಂಡುಬಂದರೆ ಸ್ಥಳೀಯ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಬೇಕು. ನದಿಯಲ್ಲಿನ ನೀರಿನ ಹರಿವು ಹೆಚ್ಚಾಗಿರುವುದರಿಂದ ನದಿ ತೀರದ ಗ್ರಾಮಸ್ಥರು ಹಾಗೂ ರೈತರು ಎಚ್ಚರಿಕೆ ವಹಿಸಬೇಕು. ಮಳೆ ಮತ್ತು ನದಿಪಾತ್ರ ಗ್ರಾಮಗಳಲ್ಲಿ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ನಿರಂತರ ಸಂಪರ್ಕದಲ್ಲಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News