'ಖಾವಿ ಕಳಚಿ ಖಾದಿ ಧರಿಸಿ' ಎಂದು ಒತ್ತಾಯಿಸಿ ಮೈಸೂರಿನಲ್ಲಿ ವಿನೂತನ ಪ್ರತಿಭಟನೆ
ಮೈಸೂರು,ಜು.25: ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿಪ್ಲವದಲ್ಲಿ ಮಠಾಧಿಪತಿಗಳ ಪಾತ್ರ ಘನಘೋರವಾಗಿದ್ದು, ಒರ್ವ ವ್ಯಕ್ತಿ ಮತ್ತು ಒಂದು ಪಕ್ಷದ ಬೆಂಬಲಕ್ಕೆ ನಿಂತಿರುವ ಮಠಾಧೀಪತಿಗಳು “ಖಾವಿ ಕಳಚಿ ಖಾದಿ ಧರಿಸಿ” ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಖಾವಿ ಬಟ್ಟೆ ಧರಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ರವಿವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಠಾಧೀಪತಿಗಳ ನಡೆಯನ್ನು ಖಂಡಿಸಿದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, ಧಾರ್ಮಿಕ ಪ್ರಜ್ಞೆ , ಸಾಮಾಜಿಕ ಪ್ರಜ್ಞೆ, ಬಸವಾಧಿ ಶರಣರ ತತ್ವಗಳನ್ನು ಪ್ರಚಾರ ಮಾಡುವುದರ ಮೂಲಕ ಜನರಲ್ಲಿ ಪ್ರಜ್ಞೆ ಮೂಡಿಸಬೇಕಾಗಿದ್ದ ಮಠಾಧೀಪತಿಗಳು ರಾಜಕಾರಣ ಮಾಡಲು ಧುಮುಕಿರುವುದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಸಂಪನ್ಮೂಲ ಮಠಗಳಲ್ಲಿ ಕ್ರೂಡೀಕರಣಗೊಂಡಿದೆ. ಜನರ ತೆರಿಗೆ ಹಣ ಮತ್ತು ಸಂಪತ್ತು ಮಠಗಳಲ್ಲಿ ಸೇರಿಕೊಂಡಿದೆ. ಹಾಗಾಗಿ ಮಠಗಳನ್ನು ರಾಷ್ಟ್ರೀಕರಣಗೊಳಿಸಿ ಅಲ್ಲಿ ಶೇಖರಣೆಯಾಗಿರುವ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ರಾಜ್ಯದ ಜನರ ಹಿತಕ್ಕೆ ಬಳಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಮಠಾಧೀಪತಿಗಳು ಮುಖ್ಯಮಂತ್ರಿ ಬಿ.ಎಸ.ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತು ಸಮಾವೇಶ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಇಂದು ಮೈಸೂರಿನಲ್ಲಿ ನಾವು ಈ ವಿನೂತನ ಪ್ರತಿಭನೆ ನಡೆಸುತ್ತಿದ್ದು, ಕೂಡಲೇ ಮಠಾಧೀಪತಿಗಳು ಖಾವಿ ಕಳಚಿ ಖಾಧಿ ಧರಿಸಿ ರಾಜಕಾರಣ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್, ಲೋಕೆಶ್ ಮಾದಾಪುರ, ಆರ್.ಕೆ.ರವಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷರಾದ ಎಚ್.ಎಸ್.ಪ್ರಕಾಶ್, ಎಂ.ಮಹದೇವನಾಯಕ, ಎಂ.ಮಹೇಂದ್ರ ಕಾಗಿನೆಲೆ, ದೀಪಕ್ ಪುಟ್ಟಸ್ವಾಮಿ, ರೋಹಿತ್, ಮೈಸೂರು ಬಸವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.