ಬಿಜೆಪಿ ಯಾವ ಮುಖ ಇಟ್ಟುಕೊಂಡು 2 ವರ್ಷದ ಸಾಧನೆಯ ಸಂಭ್ರಮ ಪಡುತ್ತಿದ್ದಾರೆ: ದಿನೇಶ್ ಗುಂಡೂರಾವ್ ಪ್ರಶ್ನೆ

Update: 2021-07-25 15:14 GMT

ಬೆಂಗಳೂರು, ಜು. 25: `ಆಪರೇಷನ್ ಕಮಲ ಎಂಬ ಅನಿಷ್ಟ ಮಾರ್ಗದ ಮೂಲಕ ಹೇಗೆ ಅಧಿಕಾರಕ್ಕೆ ಬರಬಹುದು ಎಂದು ತೋರಿಸಿಕೊಟ್ಟಿದ್ದೇ ಈ ಸರಕಾರದ ಸಾಧನೆ. ಸರಕಾರದ 2 ವರ್ಷದ ಅವಧಿಯಲ್ಲಿ ಜನರು ಪಟ್ಟಿರುವ ಸಂಕಷ್ಟ ಕಣ್ಣಿಗೆ ಕಾಣುತ್ತಿದೆ. ಈ ಸರಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ. ಬಿಜೆಪಿ ಯಾವ ಮುಖ ಇಟ್ಟುಕೊಂಡು 2 ವರ್ಷದ ಸಾಧನೆಯ ಸಂಭ್ರಮ ಪಡುತ್ತಿದ್ದಾರೆ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಟೀಕಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಡಬಲ್ ಇಂಜಿನ್ ಹೆಸರಿನ ಈ ಸರಕಾರ 2 ವರ್ಷದಲ್ಲಿ ಜನರಿಗೆ ದೋಖಾ ಮಾಡಿದ್ದೇ ಸಾಧನೆ. 2 ವರ್ಷದ ಅವಧಿಯಲ್ಲಿ ಬದುಕು ಬೀದಿಗೆ ಬಂತು, ಉದ್ಯೋಗ ನಷ್ಟವಾಯ್ತು, ಕೊಳ್ಳುವ ಸಾಮಥ್ರ್ಯ ಕುಸಿಯಿತು. ಕೊರೊನ ಕಾಲದಲ್ಲೂ ಭ್ರಷ್ಟಾಚಾರ ಎಸಗಿದ ಹೊಲಸು ಸರಕಾರವಿದು. ನುಂಗುಬಾಕರ ಈ ಸರಕಾರ ಅಧಿಕಾರದಲ್ಲುಳಿಯಲು ಯಾವ ನೈತಿಕತೆಯಿದೆ?' ಎಂದು ಪ್ರಶ್ನಿಸಿದ್ದಾರೆ.

`ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರವಿದ್ದರೆ ಸ್ವರ್ಗ ಸೃಷ್ಟಿಯಾಗಲಿದೆ ಎಂದು 2019ರಲ್ಲಿ ಅನೈತಿಕವಾಗಿ ಈ ಸರಕಾರ ರಚನೆಯಾಗಿತ್ತು. ಆದರೆ, 2 ವರ್ಷದ ಅವಧಿಯಲ್ಲಿ ಜನರು ರೌರವ ನರಕ ಕಾಣುವಂತಾಯ್ತು. 2 ವರ್ಷದ ಹಿಂದೆ ಸುರಿದ ಮಳೆಗೆ ನಿರ್ಗತಿಕರಾದ ಜನರಿಗೆ ಇನ್ನೂ ಪರಿಹಾರ ಕೊಡಲು ಯೋಗ್ಯತೆ ಇಲ್ಲದ ಸರಕಾರವಿದು. ಹೀಗಿರುವಾಗ ಸಂಭ್ರಮ ಏಕೆ?' ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

`ಬಿಜೆಪಿ ನಾಯಕರು 2 ವರ್ಷ ಅಧಿಕಾರ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಆದರೆ, ಈ ಸಂಭ್ರಮ ಯಾವ ಸುಖಕ್ಕೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಹಿಂಬಾಗಿಲಿನಿಂದ ಅನೈತಿಕವಾಗಿ ರಚನೆಯಾದ ಈ ಸರ್ಕಾರ ಪ್ರಾರಂಭದಿಂದಲೂ ಮಾಡಿದ್ದು ಅನೈತಿಕ ಕೆಲಸ ಮಾತ್ರ. ಎರಡು ವರ್ಷದಲ್ಲಿ ಭ್ರಷ್ಟಾಚಾರ ಬಿಟ್ಟರೆ ಈ ಸರಕಾರ ಜನರಿಗೇನು ಮಾಡಿದೆ?' ಎಂದು ದಿನೇಶ್ ಗುಂಡೂರಾವ್ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News