ಕೊಡಗಿನಲ್ಲಿ ಪ್ರವಾಸಿಗರ ದಂಡು: ಮುನ್ನೆಚ್ಚರಿಕೆ ಕ್ರಮಕ್ಕೆ ಸಾರ್ವಜನಿಕರ ಮನವಿ

Update: 2021-07-25 18:35 GMT

ಮಡಿಕೇರಿ ಜು.25 : ಕೊಡಗಿನಲ್ಲಿ ಮಹಾಮಳೆ ಸರಿದು ಮುಸುಕಿದ ಮಂಜು, ಮೈಕೊರೆಯುವ ಚಳಿಯ ವಾತಾವರಣ ಪ್ರಕೃತಿ ಪ್ರಿಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ವಾರಾಂತ್ಯ ಎರಡು ದಿನ ರಜೆ ಇದ್ದ ಕಾರಣ ಪ್ರವಾಸಿಗರ ದಂಡೇ ಜಿಲ್ಲೆಯ ಪ್ರವಾಸಿತಾಣಗಳಿಗೆ ಲಗ್ಗೆ ಇಟ್ಟು ಮಾನ್ಸೂನ್ ಮಜಾ ಅನುಭವಿಸಿತು.

ಕೋವಿಡ್ ಕರಿನೆರಳಿನಿಂದ ಕತ್ತಲೆಯಲ್ಲಿದ್ದ ಕೊಡಗಿನ ಪ್ರವಾಸೋದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಇಲ್ಲಿನ ಮುಂಗಾರು ಮಳೆಗೆ ಪ್ರವಾಸಿಗರು ಆಕರ್ಷಿತರಾಗುತ್ತಿದ್ದಾರೆ. ಮಡಿಕೇರಿಯ ರಾಜಾಸೀಟು ಉದ್ಯಾನವನ, ಗದ್ದಿಗೆ, ಅಬ್ಬಿ ಜಲಪಾತ, ಜನರಲ್ ತಿಮ್ಮಯ್ಯ ಸನ್ನಿಸೈಡ್ ಮ್ಯೂಸಿಯಂ, ಮಾಂದಲಪಟ್ಟಿ, ಕೋಟೆಬೆಟ್ಟ, ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತ ಸೇರಿದಂತೆ ಜಿಲ್ಲೆಯ ಎಲ್ಲಾ ಆಕರ್ಷಕ ಪ್ರವಾಸಿತಾಣಗಳು ಪ್ರವಾಸಿಗರಿಗೆ ಮುಕ್ತವಾಗಿದೆ.

ಕಳೆದ ಎರಡು ದಿನಗಳಿಂದ ರಾಜಾಸೀಟು ಉದ್ಯಾನವನ ಮತ್ತು ಅಬ್ಬಿ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬಂತು. ಸುರಿಯುವ ಮಳೆಯ ನಡುವೆಯೇ ಪ್ರಕೃತಿ ಸೌಂದರ್ಯವನ್ನು ಸವಿದ ಪ್ರವಾಸಿಗರು ಕೊಡಗಿನ ಖಾದ್ಯಗಳಿಗೆ ಮನಸೋತರು.

 ಅಬ್ಬಿ ಪ್ರದೇಶ ಇಕ್ಕಟ್ಟಾಗಿದ್ದು, ಅನಾಹುತಗಳು ನಡೆಯುವ ಮೊದಲು ಜಲಪಾತದ ಬಳಿ ಪ್ರವಾಸಿಗರಿಗೆ ಅಗತ್ಯ ಮುನ್ನೆಚ್ಚರಿಕೆಯ ಸಲಹೆಗಳನ್ನು ನೀಡಲು ಗ್ರಾ.ಪಂ ಅಥವಾ ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರ ಆಗಮನವಾಗುತ್ತಿದ್ದು, ಬಹುತೇಕರು ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ದೃಶ್ಯ ಕಂಡು ಬಂದಿದೆ. ಕನಿಷ್ಠ ಮಾಸ್ಕ್ ನ್ನಾದರೂ ಧರಿಸಲು ಸೂಚನೆ ನೀಡಬೇಕೆಂದು ಜಿಲ್ಲೆ ಜನ ಒತ್ತಾಯಿಸಿದ್ದಾರೆ.

ಹೊಟೇಲ್, ಲಾಡ್ಜ್, ಹೋಂಸ್ಟೇ ಸೇರಿದಂತೆ ಅಂಗಡಿ ಮಳಿಗೆಗಳಲ್ಲಿ ವ್ಯವಹಾರ ಕೊಂಚ ಚೇತರಿಕೆ ಕಂಡಿದೆ. ಆದರೆ ಪ್ರವಾಸಿಗರ ಆಗಮನದ ಬಗ್ಗೆ ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ಪರ, ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News