ದೆಹಲಿಯಿಂದ ಯಾವುದೇ ಒತ್ತಡ ಇಲ್ಲ, ರಾಜೀನಾಮೆ ನನ್ನ ಸ್ವಂತ ನಿರ್ಧಾರ: ಬಿ.ಎಸ್ ಯಡಿಯೂರಪ್ಪ

Update: 2021-07-26 13:40 GMT

ಬೆಂಗಳೂರು,ಜು.26: ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. 

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಹೈಕಮಾಂಡ್ ನನಗೆ ಎಲ್ಲವನ್ನೂ ನೀಡಿದೆ. ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಹುದ್ದೆಯನ್ನು ನೀಡಿ ಸಹಕರಿಸಿದೆ ಎಂದು ಹೇಳಿದರು. 

ಸ್ವಯಂಪ್ರೇರಣೆಯಿಂದ ರಾಜೀನಾಮೆ: `ನನ್ನ ಮೇಲೆ ದಿಲ್ಲಿಯಿಂದ ಯಾವುದೇ ಒತ್ತಡ ಇಲ್ಲ. ಬೇರೆಯವರಿಗೆ ಅವಕಾಶ ಸಿಗಬೇಕೆಂದು ನಾನೇ ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ' ಎಂದ ಯಡಿಯೂರಪ್ಪ, `ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಶ್ರಮಿಸುತ್ತೇನೆ' ಎಂದು ಘೋಷಿಸಿದರು.

`ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿಯಾಗಿ ನಾನು ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ. ಆ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಅವರು ಯಾರನ್ನೇ ಮುಖ್ಯಮಂತ್ರಿಯಾಗಿ ಮಾಡಿದರೂ ಅವರಿಗೆ ಎಲ್ಲ ರೀತಿಯ ನೆರವು ನೀಡುತ್ತೇನೆ' ಎಂದ ಯಡಿಯೂರಪ್ಪ, `ಪಕ್ಷದ ಸಂಘಟನೆ ಬಲಪಡಿಸಲು ಕೆಲಸ ಮಾಡುತ್ತೇನೆಯೆ ಹೊರತು ರಾಜ್ಯಪಾಲರ ಹುದ್ದೆ ಸೇರಿದಂತೆ ಬೇರೆ ಯಾವುದೇ ಸ್ಥಾನಮಾನವನ್ನು ನಾನು ಒಪ್ಪಿಕೊಳ್ಳುವ ಪ್ರಶ್ನೆಯೆ ಇಲ್ಲ' ಎಂದು ಸ್ಪಷ್ಟಣೆ ನೀಡಿದರು.

`ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿರುವ ವಲಸಿಗ ಸಚಿವರೂ ನಮ್ಮ ಜೊತೆಗೆ ಇದ್ದಾರೆ. ಈ ಸರಕಾರ ಅಧಿಕಾರಕ್ಕೆ ಬರಲು ನಮ್ಮೊಂದಿಗೆ ಜೊತೆಗೆ ನಿಂತ ಆ ಎಲ್ಲರಿಗೂ ಮುಂದೆಯೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಯಾರಿಗೂ ಆತಂಕ ಬೇಡ' ಎಂದು ಬಿ.ಎಸ್.ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು. 

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸಚಿವ ಡಾ.ಕೆ.ಸುಧಾಕರ್, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಬಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಆರ್.ವಿಶ್ವನಾಥ್ ಹಲವು ಮಂದಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News