ಯಡಿಯೂರಪ್ಪನವರ ರಾಜೀನಾಮೆಗೆ ಕಾರಣ ಏನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಲಿ: ಸಿದ್ದರಾಮಯ್ಯ

Update: 2021-07-26 11:50 GMT

ಬೆಂಗಳೂರು,ಜು.26: ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ನಿರೀಕ್ಷಿತವಾದುದು. ಬಹಳ ಹಿಂದೆಯೇ ನಾನು ಹೇಳಿರುವುದು ಈಗ ನಿಜವಾಗಿದೆ. ಅವರ ರಾಜೀನಾಮೆಯ ಬಗ್ಗೆ ಸಂಭ್ರಮಿಸುವಂತಹದ್ದೇನೂ ಇಲ್ಲ. ಸೈದ್ಧಾಂತಿಕವಾಗಿ, ಆಡಳಿತಾತ್ಮಕವಾಗಿ ಮತ್ತು ನೈತಿಕವಾಗಿ ಭ್ರಷ್ಟವಾಗಿರುವ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿದಾಗಲೇ ನಾವು ಸಂಭ್ರಮಿಸುವುದು. ಯಡಿಯೂರಪ್ಪನವರ ಬಗ್ಗೆ ನನಗೆ ಅನುಕಂಪವಿದೆ, ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದಷ್ಟೇ ನಾನು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಚುನಾವಣೆಯಲ್ಲಿ ಸೋತಾಗ ಮುಖ್ಯಮಂತ್ರಿ ರಾಜೀನಾಮೆ ಕೊಡಲೇಬೇಕಾಗುತ್ತದೆ, ಅದು ಪ್ರಜಾಪ್ರಭುತ್ವದ ರೂಢಿ. ಆದರೆ ಶಾಸನ ಸಭೆಯಲ್ಲಿ ಬಹುಮತ ಹೊಂದಿದ್ದ ಪಕ್ಷದ ಮುಖ್ಯಮಂತ್ರಿ ರಾಜೀನಾಮೆ ನೀಡಿದಾಗ, ಅದಕ್ಕೆ ಕಾರಣವನ್ನು ನೀಡಬೇಕಾಗುತ್ತದೆ. ಯಡಿಯೂರಪ್ಪನವರ ರಾಜೀನಾಮೆಗೆ ಕಾರಣ ಅವರ ವಯಸ್ಸೇ ಇಲ್ಲವೇ ಸರ್ಕಾರದ ಭ್ರಷ್ಟಾಚಾರವೇ? ಎನ್ನುವುದನ್ನು ಪಕ್ಷ ಸ್ಪಷ್ಟಪಡಿಸಬೇಕಾಗುತ್ತದೆ ಎಂದರು.

ಬಿಜೆಪಿ ಎನ್ನುವುದು ಭ್ರಷ್ಟಾಚಾರ ಜಾರಿ ಪಾರ್ಟಿ. ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದ ಶಾಸಕರೇ ಬಾಯ್ತುಂಬ ಮಾತನಾಡಿದ್ದಾರೆ. ‘ನಾ ಖಾವುಂಗಾ, ನಾ ಖಾನೆ ದೂಂಗಾ’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರಿಗೆ ಒಂದಿಷ್ಟು ಮಾನ - ಮರ್ಯಾದೆ ಇದ್ದರೆ, ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಿ.

ಯಡಿಯೂರಪ್ಪನವರು ಹೋದರೂ, ಇನ್ನೊಬ್ಬರು ಬಂದರೂ ಅದರ ಭ್ರಷ್ಟತೆಯ ಆತ್ಮ ಬದಲಾಗುವುದಿಲ್ಲ. ದುಡ್ಡಿನ ಬಲದಿಂದ ನಡೆಸಿದ್ದ ಆಪರೇಷನ್ ಕಮಲ ಎಂಬ ಅನೈತಿಕ ಹಾದಿಯಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ತೊಲಗಿದಾಗಲೇ ಕರ್ನಾಟಕದ ಜನತೆಗೆ ನೆಮ್ಮದಿ ಎಂದು ಹೇಳಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News