ಬಸವಣ್ಣನವರ ರೀತಿಯಲ್ಲಿ ಯಡಿಯೂರಪ್ಪನವರು ಕೂಡ ಮನುವಾದಿಗಳ ವಿರುದ್ಧ ಹೋರಾಟ ಮಾಡಬೇಕು: ಸತೀಶ್ ಜಾರಕಿಹೊಳಿ

Update: 2021-07-26 13:50 GMT

ಬೆಳಗಾವಿ, ಜು, 26: `ಹನ್ನೆರಡನೆ ಶತಮಾನದಲ್ಲಿ ಮನುವಾದಿಗಳಿಂದ ಸಮಾಜ ಸುಧಾರಕ ಅಣ್ಣ ಬಸವಣ್ಣನವರಿಗೆ ನಡೆದಿದ್ದ ಪಿತೂರಿಯೇ ಇದೀಗ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೂ ನಡೆದಿದೆ. ಹೀಗಾಗಿಯೇ ಅದೇ ಶಕ್ತಿಗಳೇ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ ಸಿಎಂ ಸ್ಥಾನದಿಂದ ಕೆಳಗಿಳಿಸಿವೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಯಡಿಯೂರಪ್ಪ ರಾಜೀನಾಮೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಬಸವಣ್ಣನವರ ರೀತಿಯಲ್ಲಿಯೇ ಯಡಿಯೂರಪ್ಪನವರನ್ನು ಕೆಳಗಿಳಿಸಲು ಪಿತೂರಿ ನಡೆಸಿರುವುದು ಇಂದು ಮರುಕಳಿಸಿದೆ. ಅಂದು ಮನುವಾದಿಗಳು ಬಸವಣ್ಣನವರನ್ನು ಕೆಳಗಿಳಿಸಲು ಯಶಸ್ವಿಯಾಗಿದ್ದರು, ಇಂದು ಬಿಜೆಪಿಯಲ್ಲಿನ ಕೆಲವರು ಯಡಿಯೂರಪ್ಪ ಅವರನ್ನು ಇಳಿಸಲು ಯಶಸ್ವಿಯಾಗಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

`ಯಡಿಯೂರಪ್ಪ ಅವರನ್ನು ಒತ್ತಡ ತಂತ್ರ ಬಳಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅವರಿಗೆ ಅವಮಾನ ಮಾಡಲಾಗಿದೆ. ಸಿಎಂ ಸ್ಥಾನದಿಂದ ಕೆಳಗಿಳಿಸಲು ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದಿರುವುದು ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿದೆ. ಆದರೆ, ಒತ್ತಡ ಹಾಕುವ ಮೂಲಕ ಈ ಅಧಿಕಾರದಿಂದ ಕೆಳಗೆ ಇಳಿಸಿದ ರೀತಿ ಸರಿಯಲ್ಲ. ಅದು ರಾಜಕೀಯದಲ್ಲಿ ಕೆಟ್ಟ ಬೆಳವಣಿಗೆ ಅನಿಸುತ್ತಿದೆ. ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಭಾವುಕರಾಗಿ ಈ ಘೋಷಣೆ ಮಾಡಿರುವುದು ಬೇಸರದ ಸಂಗತಿ' ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

`ವರಿಷ್ಟರು ಒತ್ತಡ ಹೇರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾರು ಸಹಿಸಲು ಸಾಧ್ಯವಿಲ್ಲ. 

ರಾಜ್ಯದಲ್ಲಿ ಯಡಿಯೂರಪ್ಪ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ಆದರೆ, ಇಂದು ಅವರು ಭಾವುಕರಾಗಿ ಮಾತನಾಡುವ ಮೂಲಕ ಅಧಿಕಾರದಿಂದ ಕೆಳಗೆ ಇಳಿದಿದ್ದಾರೆ. ಯಡಿಯೂರಪ್ಪ ಅವರಿಗೆ ಗೌರವಯುತವಾಗಿ ಅಧಿಕಾರದಿಂದ ತೆರಳಲು ಅವಕಾಶ ಮಾಡಿ ಕೊಡಬೇಕಿತ್ತು. ಒತ್ತಡ ತಂತ್ರದಿಂದ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ' ಎಂದು ಸತೀಶ್ ಜಾರಕಿಹೊಳಿ ಟೀಕಿಸಿದರು.

`ಯಡಿಯೂರಪ್ಪನವರು ಮನುವಾದಿಗಳ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಅವರ ಪಕ್ಷದ ಆಂತರಿಕ ವಿಷಯ. ಅದು ಕಾಂಗ್ರೆಸ್ ಪಕ್ಷದ ವಿಷಯ ಅಲ್ಲ. ಇದರಲ್ಲಿ ಕಾಂಗ್ರೆಸ್‍ಗೆ ಲಾಭ-ನಷ್ಟದ ಪ್ರಶ್ನೆಯೇ ಬರುವದಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದ ಯಡಿಯೂರಪ್ಪ ಅವರನ್ನು ಇಷ್ಟು ಅವಮಾನಗೊಳಿಸಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ' ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News