ಬಿಜೆಪಿ ಪಕ್ಷ ಬಿಎಸ್‍ವೈಗೂ ತನ್ನ ಫ್ಯಾಸಿಸಂ ಅನ್ನು ಪರಿಚಯಿಸಿದೆ: ಡಾ.ಎಚ್.ಸಿ.ಮಹದೇವಪ್ಪ ವಾಗ್ದಾಳಿ

Update: 2021-07-26 14:17 GMT

ಬೆಂಗಳೂರು, ಜು. 26: `ಎದುರಾಳಿ ಪಕ್ಷದ 17 ಜನ ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ಅನೈತಿಕ ಮಾರ್ಗದಲ್ಲಿ ಸರಕಾರವನ್ನು ರಚಿಸಲು ಹೊರಟಿದ್ದ ಪ್ರಯತ್ನಕ್ಕೆ ನೇರವಾಗಿ ಬೆಂಬಲ ನೀಡಿದ್ದ ಬಿಜೆಪಿ ಇದೀಗ ಪಕ್ಷವು ಒಂದು ಹಂತಕ್ಕೆ ತಲುಪುತ್ತಿದೆ ಎಂಬ ಸೂಚನೆಯನ್ನರಿತು ಸರಕಾರ ರಚನೆಗೆ ಕಾರಣವಾದ ಯಡಿಯೂರಪ್ಪನವರನ್ನು ಕೆಳಗಿಳಿಸಿದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಓರ್ವ ಜನ ಬೆಂಬಲ ಇರುವ ನಾಯಕನಾಗಿದ್ದರೂ ಕೇಂದ್ರದ ಬಿಜೆಪಿ ಪಕ್ಷದ ನಾಯಕರ ಪ್ರೇರಣೆಯಿಂದ ಅನೈತಿಕ ಮಾರ್ಗದಲ್ಲಿ ಸರಕಾರವನ್ನು ರಚಿಸಿದ ಯಡಿಯೂರಪ್ಪನಂತಹ ನಾಯಕನನ್ನು ಎರಡನೇ ಆಲೋಚನೆಯೇ ಇಲ್ಲದೇ ಬಿಜೆಪಿ ಪಕ್ಷವು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಮೂಲಕ ಬಿಜೆಪಿ ಪಕ್ಷ ಬಿಎಸ್‍ವೈ ಅವರಿಗೂ ತನ್ನ ಫ್ಯಾಸಿಸಂ ಅನ್ನು ಪರಿಚಯಿಸಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

`ಇದರ ಜೊತೆಗೆ ಯಡಿಯೂರಪ್ಪನವರನ್ನೇ ನಂಬಿಕೊಂಡು ಮಾಡಬಾರದ್ದನ್ನಲ್ಲಾ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಹೋಗಿದ್ದ 17 ಜನ ಶಾಸಕರು ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಆದರೆ, ಈಗ ಅವರೂ ಕೂಡಾ ಬೀದಿಪಾಲಾಗಿದ್ದಾರೆ' ಎಂದು ಡಾ.ಮಹದೇವಪ್ಪ ಇದೇ ವೇಳೆ ಲೇವಡಿ ಮಾಡಿದ್ದಾರೆ.

`ಈ ಹಿನ್ನೆಲೆಯಲ್ಲಿ ಬಿಜೆಪಿ ಉದ್ದೇಶವು ಬಿಎಸ್‍ವೈ ಮುಕ್ತ  ಆಗಿತ್ತು ಎಂಬುದನ್ನು ಎಲ್ಲ 17 ಜನ ಶಾಸಕರು ಅರಿತುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಜನಾದೇಶವನ್ನು ಪಡೆಯುವುದೇ ಸೂಕ್ತ ಎಂದು ಈ ಮೂಲಕ ನಾನು ಆಗ್ರಹಿಸುತ್ತೇನೆ!' ಎಂದು ಡಾ.ಮಹದೇವಪ್ಪ ಟ್ವಿಟ್ಟರ್ ಮೂಲಕ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News