ಬಿಎಸ್‍ವೈ ಅವರ ಕಣ್ಣೀರಿನಲ್ಲಿ ಬಿಜೆಪಿ ತೇಲಿ ಹೋಗಲಿದೆ: ಬಿಜೆಪಿ ವರಿಷ್ಟರಿಗೆ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ

Update: 2021-07-26 14:44 GMT
ಶ್ರೀ ದಿಂಗಾಲೇಶ್ವರ ಸ್ವಾಮೀಜಿ

ಬೆಂಗಳೂರು, ಜು. 26: `ಯಡಿಯೂರಪ್ಪನವರನ್ನು ಕೆಳಗಿಳಿಸುವ ಮೂಲಕ ಬಿಜೆಪಿ ಹೈಕಮಾಂಡ್ ತಪ್ಪು ನಿರ್ಧಾರ ಕೈಗೊಂಡಿದ್ದು, ಅವರನ್ನು  ಬ್ಲ್ಯಾಕ್‍ಮೇಲ್ ಮಾಡಲಾಗಿದೆ. ಇನ್ನೂ ಎರಡು ವರ್ಷ ಅವರನ್ನೇ ಸಿಎಂ ಆಗಿ ಮುಂದುವರಿಸದಿದ್ದರೆ ಬಿಜೆಪಿ, ಬಿಎಸ್‍ವೈ ಅವರ ಕಣ್ಣೀರಿನಲ್ಲಿ ತೇಲಿ ಹೋಗಲಿದೆ' ಎಂದು ಬಾಲೆಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಯಡಿಯೂರಪ್ಪ ರಾಜೀನಾಮೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, `ರಾಜ್ಯದಲ್ಲಿನ ಮಠಾಧೀಶರು ಸೇರಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಬಿ.ಎಸ್.ಯಡಿಯೂರಪ್ಪನವರ `ಕಣ್ಣೀರನ್ನು' ಸವಾಲಾಗಿ ಸ್ವೀಕರಿಸಿದ್ದೇವೆ. ಇದು ಯಡಿಯೂರಪ್ಪನವರ ಕಣ್ಣೀರಲ್ಲ. ಬದಲಿಗೆ ಇಡೀ ನಾಡಿನ ಜನತೆಯ ಕಣ್ಣೀರು. ಭವಿಷ್ಯದಲ್ಲಿ ಬಿಜೆಪಿ ಬೆಳೆಯಲಾಗದ ಸ್ಥಿತಿಗೆ ಹೋಗಲಿದೆ' ಎಂದು ಇದೇ ವೇಳೆ ಭವಿಷ್ಯ ನುಡಿದರು.

`ರಾಜ್ಯದಲ್ಲಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು, ನಮ್ಮ ಸಮುದಾಯದ ಒಬ್ಬ ಅಗ್ರ ನಾಯಕನನ್ನು ಕಣ್ಣೀರು ಹಾಕಿದ್ದಲ್ಲ, ಬದಲಿಗೆ ಇಡೀ ನಮ್ಮ ಸಮುದಾಯದ ಎಲ್ಲರೂ ಕಣ್ಣೀರು ಹಾಕುವಂತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಾವು ಕಣ್ಣೀರು ಹಾಕಿಸುತ್ತೇವೆ' ಎಂದು ದಿಂಗಾಲೇಶ್ವರ ಸ್ವಾಮೀಜಿ, `ಯಡಿಯೂರಪ್ಪನವರನ್ನು ಕೆಳಗಿಳಿಸಬಾರದು ಎಂದು ಎಲ್ಲ ಸಮುದಾಯದ ಮಠಾಧೀಶರು ಒತ್ತಾಯಿಸುತ್ತಿದ್ದೇವೆ' ಎಂದು ಹೇಳಿದರು. 

`ಬಿ.ಎಸ್.ಯಡಿಯೂರಪ್ಪನವರ ಫೋಟೋ ಹಿಡಿದುಕೊಂಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಆದರೆ, ಇದೀಗ ಅವರನ್ನು ಜಾಡಿಸಿ ಒದೆಯಲಾಗಿದೆ. ಬಿಎಸ್‍ವೈ ಅವರನ್ನು ಕೆಳಗೆ ಇಳಿಸಿದರೆ 20 ವರ್ಷ ಬಿಜೆಪಿ ಸರ್ವನಾಶವಾಗಲಿದೆ. ಬಿಜೆಪಿಯವರಿಗೆ ಧೈರ್ಯವಿದ್ದರೆ ಈಗಲೇ ವಿಧಾನಸಭೆ ಚುನಾವಣೆ ಘೋಷಣೆ ಮಾಡಿ 20 ಸ್ಥಾನಗಳನ್ನು ಗೆಲ್ಲಲಿ, ನಾವು ಕಾವಿ ಬಟ್ಟೆ ಕಳಚಿ ಕಾಡು ಸೇರಿಕೊಳ್ಳುತ್ತೇವೆ'

- ರುದ್ರಮುನಿ ಷಡಕ್ಷರಿ ಸ್ವಾಮೀಜಿ ತಿಪಟೂರಿನ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News