ಸಾಧನಾ ಸಮಾವೇಶದಲ್ಲೆ ಬಿ.ಎಸ್.ಯಡಿಯೂರಪ್ಪ ಕಣ್ಣೀರಿನ ವಿದಾಯ

Update: 2021-07-26 14:39 GMT

ಬೆಂಗಳೂರು, ಜು. 26: ರಾಜ್ಯದಲ್ಲಿ ಬಿಜೆಪಿಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ `ಸಾಧನಾ ಸಮಾವೇಶ'ದಲ್ಲೇ  ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜೀನಾಮೆ ಘೋಷಣೆ ಮಾಡುವ ಮೂಲಕ ಕಣ್ಣೀರಿನ ವಿದಾಯ ಭಾಷಣ ಮಾಡಿದರು.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‍ನಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, `ಬಿಜೆಪಿ ನೇತೃತ್ವದ ಸರಕಾರದ ಸಾಧನೆಗಳ ಬದಲಿಗೆ ತಮ್ಮ ರಾಜಕೀಯ ಏಳು-ಬೀಳುಗಳನ್ನು ನೆನಪು ಮಾಡಿಕೊಳ್ಳುತ್ತಲೇ ಎಂತಹ ಸಂಕಷ್ಟದ ಸ್ಥಿತಿಗಳನ್ನು ಎದುರಿಸಿದೆ ಎಂದು ಬಿಚ್ಚಿಟ್ಟಿರು. ಅಲ್ಲದೆ, ಸಂತೋಷದಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ರಾಜೀನಾಮೆ ನೀಡುತ್ತಿದ್ದೇನೆ' ಎಂದು ಉಮ್ಮಳಿಸಿ ಬಂದ ದುಃಖವನ್ನು ತೋರ್ಪಡಿಸದೆ ಗದ್ಗದಿತರಾದರು.

`ನನಗೆ ಎಪ್ಪತ್ತೈದು ವರ್ಷಗಳು ದಾಟಿದ್ದರೂ ಮುಖ್ಯಮಂತ್ರಿಯಾಗಿ ಮುಂದುವರಿಯಲು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಅವಕಾಶ ನೀಡಿದ್ದು, ಅವರಿಗೆ ಶಬ್ದಗಳ ಮೂಲಕ ಅಭಿನಂದನೆ ಸಲ್ಲಿಸಲು ಸಾಧ್ಯವಿಲ್ಲ. ಅವರಿಗೆ ನಾನು ಸದಾ ಋಣಿ' ಎಂದ ಯಡಿಯೂರಪ್ಪ, `ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು' ಎಂದು ಪ್ರತಿಪಾದಿಸಿದರು.

`ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರೊಂದಿಗೆ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪಕ್ಷ ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಅವಧಿಯಲ್ಲಿ ಪಕ್ಷವನ್ನು ಕಟ್ಟಿದ್ದೇನೆ' ಎಂದು ಬಾವುಕರಾದ ಯಡಿಯೂರಪ್ಪ, `ದೆಹಲಿಗೆ ಬರುವಂತೆ ವರಿಷ್ಟರೂ ಸೂಚನೆ ನೀಡಿದ ಸಂದರ್ಭದಲ್ಲಿಯೂ ನಾನು ರಾಜ್ಯದಲ್ಲಿ ಪಕ್ಷವನ್ನು ಕಟ್ಟುತ್ತೇನೆ ಎಂದು ಅವರಿಗೆ ಸ್ಪಷ್ಟವಾಗಿಯೇ ತಿಳಿಸಿದ್ದೆ' ಎಂದು ನೆನಪು ಮಾಡಿಕೊಂಡರು.

`ವಿಧಾನಸಭೆಯಲ್ಲಿ ವಸಂತ ಬಂಗೇರಾ ಹಾಗೂ ನಾನು ಇಬ್ಬರೇ ಇದ್ದ ಸಂದರ್ಭದಲ್ಲಿಯೂ ಎದೆಗುಂದಲಿಲ್ಲ. ಅವರ ಬಿಟ್ಟು ಹೋದರು. ಆಗಲೂ ನಾನು ಒಬ್ಬಂಟಿಯಾಗಿ ಹೋರಾಟ ಮಾಡಬೇಕಾಯಿತು. ಯಾವುದೇ ಸಂದರ್ಭದಲ್ಲಿಯೂ ನಾನು ಹಿಂದೆ ತಿರುಗಿ ನೋಡಲಿಲ್ಲ. ನನ್ನ ಕರ್ತವ್ಯವನ್ನು ರಾಜ್ಯದ ಜನತೆ ಮೆಚ್ಚುವಂತೆ ಮಾಡಿದ್ದೇನೆ. ಹಲವಾರು ಸಂಕಷ್ಟದ ಸ್ಥಿತಿಗಳನ್ನು ನಾನು ಎದುರಿಸಿದೆ. ನನ್ನ ಬದುಕು ರಾಜ್ಯದ ಜನತೆ ಮೀಸಲು ಎಂದು ಶಪತ ಮಾಡಿದ್ದೆ. ಅದೇ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ' ಎಂದು ಯಡಿಯೂರಪ್ಪ ಸ್ಮರಿಸಿದರು.

`ನನ್ನ ಬಳಿ ಒಂದು ಕಾರು ಇಲ್ಲದ ದಿನಗಳಲ್ಲಿ ಸೈಕಲ್, ಬೈಕ್‍ನಲ್ಲಿ ಸುತ್ತಾಡಿ ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಇಂದು ಆ ದಿನಗಳನ್ನು ನೆನಪು ಮಾಡಿಕೊಂಡರೆ ಆಶ್ಚರ್ಯವಾಗುತ್ತದೆ. ಅಂದಿನ ನಮ್ಮ ಶ್ರಮದಿಂದಲೇ ಇಂದು ಪಕ್ಷ ಅಧಿಕಾರಕ್ಕೆ ಬರುವ ರೀತಿಯಲ್ಲಿ ಆಗಿದೆ. ಕಾರ್ಯಕರ್ತರ ಶ್ರಮ, ಎಲ್ಲರ ಒಗ್ಗಟ್ಟಿನಿಂದಾಗಿ ಪಕ್ಷ ಇಂದು ಅಧಿಕಾರ ಹಿಡಿಲು ಸಾಧ್ಯವಾಗಿದೆ' ಎಂದು ಯಡಿಯೂರಪ್ಪ ತಮ್ಮ ಹೋರಾಟದ ಬದುಕನ್ನು ನೆನಪು ಮಾಡಿಕೊಂಡರು.

`ರಾಜ್ಯದಲ್ಲಿನ ದಲಿತರು, ಹಿಂದುಳಿದವರು, ಮಹಿಳೆಯರು ಹಾಗೂ ರೈತರ ಪರವಾಗಿ ಸದಾ ಚಳವಳಿ ಮಾಡಿಕೊಂಡು ಬಂದಿದ್ದು, ರಾಜ್ಯದಲ್ಲಿ ಅನ್ನದಾತ ಸ್ವಾಭಿಮಾನದಿಂದ ಬದುಕಬೇಕು ಎಂದು ಹೋರಾಟ ಮಾಡಿದ್ದೇನೆ. ಜೊತೆಗೆ ಅಧಿಕಾರಕ್ಕೆ ಬಂದಾಗಲೂ ಪ್ರತ್ಯೇಕ ರೈತ ಬಜೆಟ್ ಮಂಡನೆ ಮಾಡಿದ್ದು, ಶೂನ್ಯ ಬಡ್ಡಿ ದರದಲ್ಲಿ ಅವರಿಗೆ ಸಾಲಸೌಲಭ್ಯ ಕಲ್ಪಿಸಲು ಶ್ರಮಿಸಿದ್ದೇನೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲ ವರ್ಗದ ಏಳ್ಗೆಗಾಗಿ ಕೆಲಸ ಮಾಡಿದ್ದೇನೆ' ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News