‘ಕರ್ನಾಟಕದಲ್ಲಿ ವಿಜ್ಞಾನ ಶಿಕ್ಷಣದ ಪುನರುಜ್ಜೀವನ’-ಕಾರ್ಯನೀತಿ ಪತ್ರ

Update: 2021-07-26 16:07 GMT

ಬೆಂಗಳೂರು, ಜು.26: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿದ್ದು, ರಾಜ್ಯದಲ್ಲಿ ವಿಜ್ಞಾನ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುತ್ತಿದೆ ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುತ್ತಿದೆ.

ಇಂಫಾಲದಲ್ಲಿರುವ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ನಿವೃತ್ತ ಮಹಾನಿರ್ದೇಶಕ ಪ್ರೊ.ಎಸ್.ಅಯ್ಯಪ್ಪನ್ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಕಾಡೆಮಿಯು ವಿವಿಧ ವಿಷಯಗಳಿಗೆ ಸಂಬಂಧಿಸಿದ ಕಾರ್ಯನೀತಿ, ಕಾರ್ಯತಂತ್ರ ಮತ್ತು ವಸ್ತುಸ್ಥಿತಿ ಪತ್ರಗಳನ್ನು ತಜ್ಞರ ಅಭಿಪ್ರಾಯಗಳೊಂದಿಗೆ ಆಗಿಂದಾಗ್ಗೆ ಹೊರತಂದು ಯೋಜಕರಿಗೆ ಮಾಹಿತಿ ಆಧಾರಿತ ನಿರ್ಧಾರವನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತಿದೆ.

ಭಾರತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇಪ್ಪತ್ತೊಂದನೇ ಶತಮಾನದ ಸವಾಲುಗಳನ್ನು ಎದುರಿಸಲು ವಿಜ್ಞಾನ ಶಿಕ್ಷಣವನ್ನು ಪುನರುಜ್ಜೀವನಗೊಳಿಸಲು ಮತ್ತು ಪರಿಷ್ಕರಿಸಲು ಇದು ಸಕಾಲವಾಗಿದೆ.
ಈ ಉದ್ದೇಶದೊಂದಿಗೆ ಉನ್ನತ ಶಿಕ್ಷಣದ ಯೋಜಕರಿಗೆ ಸಹಕಾರಿಯಾಗಲು ಶಿಕ್ಷಣ ತಜ್ಞರು ಮತ್ತು ಅಕಾಡೆಮಿ ಸದಸ್ಯರು ಆದ ಧಾರವಾಡದ ಕರ್ನಾಟಕ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಕೆ.ಸೈದಾಪುರ್ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞ ಸಮಿತಿಯು “ಕರ್ನಾಟಕದಲ್ಲಿ ವಿಜ್ಞಾನ ಶಿಕ್ಷಣದ ಪುನರುಜ್ಜೀವನ” (Revamping Science Education in Karnataka) ಎಂಬ ಕಾರ್ಯನೀತಿ ಪತ್ರವನ್ನು ಹೊರತಂದಿದೆ.

ಈ ಪತ್ರವು ಭಾರತದಲ್ಲಿ ವಿಜ್ಞಾನ ಶಿಕ್ಷಣದ ಇತಿಹಾಸದ ಜಾಡು, ಡಿಜಿಟಲ್ ಕ್ರಾಂತಿಯ ಸವಾಲುಗಳು (ಅಂತರ್ಜಾಲದ ಮೂರನೇ ಅಲೆ– ಎಲ್ಲದರಲ್ಲೂ ಅಂತರ್ಜಾಲ: the third wave of internet -internet of everything ಹಾಗೂ ಅದರಿಂದ ಉದ್ಯೋಗಕ್ಕೆ ಉಂಟಾಗುತ್ತಿರುವ ಹಲವು ಸಮಸ್ಯೆಗಳನ್ನು ಗುರುತಿಸಿದೆ ಹಾಗೂ ವಿಜ್ಞಾನ ಶಿಕ್ಷಣವನ್ನು ಪುನರುಜ್ಜೀವನಗೊಳಿಸುವ ಅಗತ್ಯತೆಗಳನ್ನು ಸ್ಪಷ್ಟವಾಗಿ ತಿಳಿಸಿದೆ. ಇದು ನಿಜಕ್ಕೂ ಕರ್ನಾಟಕದಲ್ಲಿ ವಿಜ್ಞಾನ ಶಿಕ್ಷಣವನ್ನು ಅರ್ಥಪೂರ್ಣವಾಗಿ ಪುನರುಜ್ಜೀವನಗೊಳಿಸಲು/ ಪರಿಷ್ಕರಿಸಲು ಒಂದು ಕ್ರಿಯಾತ್ಮಕ ದಾಖಲೆಯಾಗಿದೆ.

ಪದವಿ ಮತ್ತು ಸ್ನಾತಕೋತ್ತರ ಪದವಿ ಮಟ್ಟಗಳಲ್ಲಿ ವಿಜ್ಞಾನ ಶಿಕ್ಷಣವನ್ನು ಜಾಗತಿಕ ಮಾನದಂಡ ಗಳಿಗನುಸಾರವಾಗಿ ಆಧುನೀಕರಿಸುವ ನಿಟ್ಟಿನಲ್ಲಿ “ಮೂಲ ಸೌಕರ್ಯದ ಅಗತ್ಯತೆಗಳು, ಬೋಧಕ ವರ್ಗದ ಸಬಲೀಕರಣ, ಪಠ್ಯಕ್ರಮದ ಅಭಿವೃದ್ಧಿ, ಬೋಧನಾ ಮತ್ತು ಕಲಿಕಾ ಪ್ರಕ್ರಿಯೆಗಳು ಮತ್ತು ಮೌಲ್ಯಮಾಪನಾ, ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ, ವಿಜ್ಞಾನ ಸಂವಹನ ಹಾಗೂ ನೈತಿಕತೆಯ ಅಭ್ಯಾಸ” ಕುರಿತು ಈ ವರದಿಯು ಹಲವಾರು ನಿರ್ದಿಷ್ಟ ಶಿಫಾರಸ್ಸುಗಳನ್ನು ಮಾಡಿದೆ.

ಜಾಗತಿಕ ಸವಾಲುಗಳನ್ನು ಎದುರಿಸಲು ಹಾಗೂ ಜಾಗತಿಕ ಸ್ಥಾನಮಾನವನ್ನು ಗಳಿಸಲು ಭಾರತಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಭದ್ರ ಬುನಾದಿಯು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸದರಿ ಕಾರ್ಯನೀತಿ ಪತ್ರವು ಕರ್ನಾಟಕವಲ್ಲದೇ, ಇಡೀ ದೇಶದಲ್ಲೇ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಒಂದು ಉತ್ತಮ ಹೆಜ್ಜೆಯಾಗಲಿದೆ. ಒಂದು ರೀತಿಯಲ್ಲಿ ಈ ಪತ್ರವು ವಿಜ್ಞಾನ ಶಿಕ್ಷಣದ ನಿರ್ವಹಣೆಗೆ ಆಕರ ಗ್ರಂಥವಾಗಲಿದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ–2020ಕ್ಕೆ ಒಂದು ಪೂರಕ ದಾಖಲೆಯಾಗಲಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ತಾಣವಾಗಿರುವ ಕರ್ನಾಟಕವು ಮೊದಲಿಗೆ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೆ ಅಗತ್ಯವಿರುವ ತಿದ್ದುಪಡಿಯನ್ನು ಮಾಡಿ, ಇತರ ರಾಜ್ಯಗಳಿಗೆ ಮಾದರಿಯಾಗಬೇಕು. ಈ ಕಾರ್ಯನೀತಿ ಪತ್ರದ ಪ್ರತಿಗಳು ಆಸಕ್ತ ವಿಭಾಗಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ದೊರಕಿಸಿಕೊಡಲಾಗುವುದು ಹಾಗೂ ಅದರ ವಿದ್ಯುನ್ಮಾನ ಪ್ರತಿಯು ಅಕಾಡೆಮಿಯ ವೆಬ್ ತಾಣ  https://kstacademy.in/ ನಲ್ಲಿ ಲಭ್ಯವಿದೆ  ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News